ಬಾಗಲಕೋಟೆ : ಅನ್ಯಕೋಮಿನ ಯುವತಿ ಹಾಗೂ ಹಿಂದೂ ಯುವಕ ಪ್ರೀತಿಸಿ ಮದುವೆಯಾದ ಹಿನ್ನೆಲೆ ಮುಸ್ಲಿಂ ಸಮುದಾಯದ ಪರ ಪೊಲೀಸರು ಇದ್ದಾರೆ ಎಂದು ಆರೋಪಿಸಿ ಬಾಗಲಕೋಟೆ ನಗರದಲ್ಲಿ ನವನಗರ ಠಾಣೆ ಸಿಪಿಐ ರಾಮಣ್ಣ ಬಿರಾದಾರ ವಿರುದ್ಧ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಪೊಲೀಸರು, ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದ್ದು, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎಂದು ವರದಿಯಾಗಿದೆ.
ಪ್ರತಿಭಟನೆ ವೇಳೆ ಉದ್ರಿಕ್ತರಿಂದ ಕಲ್ಲು ತೂರಾಟ
ಹಿಂದೂ ಸಂಘಟನೆ ಪ್ರತಿಭಟನೆ ವೇಳೆ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನಲೆ ಹಿಂದೂ ಪರ ಸಂಘಟನೆಗಳ ಮನೋಜ್, ಕುಮಾರಸ್ವಾಮಿ ಮತ್ತು ವಿಕ್ರಮ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ್ ರೆಡ್ಡಿ ಭೇಟಿ ನೀಡಿದ್ದು, ಎಸ್ಪಿ ಜೊತೆ ಚರಂತಿಮಠ ಮಾತುಕತೆ ನಡೆಸಿ, ಸಿಪಿಐ ರಾಮಣ್ಣ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ. ಅದಕ್ಕೆ ಎಸ್ಪಿ ಅಮರನಾಥ್ ರೆಡ್ಡಿ ಒಪ್ಪಿದ್ದಾರೆ.
ಬಾದಾಮಿ ಮೂಲದ ಯುವತಿ ಹಾಗೂ ಮಾಂತೇಶ್ ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿ ರಕ್ಷಣೆ ಕೋರಿ ನವದಂಪತಿ ಬಾಗಲಕೋಟೆ ಎಸ್ಪಿ ಕಚೇರಿಗೆ ಬಂದಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತರು, ಯುವತಿ ಕುಟುಂಬಸ್ಥರು ಆಗಮಿಸಿದ್ದರು. ಈ ವೇಳೆ ಈ ಘಟನೆ ನಡೆದಿದ್ದು, ಈ ಕುರಿತು ವೀರಣ್ಣ ಚರಂತಿಮಠ ಇಂದು ಹಿಂದೂ ಪರ ಸಂಘಟನೆಗಳ ಸಭೆ ಕರೆದಿದ್ದಾರೆ.
ಇನ್ನು ಸ್ಥಳದಲ್ಲಿ ಪರಿಸ್ಥಿತಿ ಉದ್ವಿಗ್ನವಾದ ಹಿನ್ನಲೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.