ಮುಂಬೈ, ಮೇ.11: ತಮ್ಮ ಪುಸ್ತಕದ ಶೀರ್ಷಿಕೆಯಲ್ಲಿ ಬೈಬಲ್ ಪದ ಬಳಕೆ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ನಟಿ ಕರೀನಾ ಕಪೂರ್ ಅವರಿಗೆ ಮಧ್ಯ ಪ್ರದೇಶ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ನಿರ್ದಿಷ್ಟ ದಿನದ ಒಳಗಾಗಿ ಉತ್ತರ ನೀಡುವಂತೆ ಸೂಚಿಸಿದೆ.
ಕರೀನಾ ಕಪೂರ್ ಕೆಲ ವರ್ಷಗಳ ಹಿಂದೆ ಗರ್ಭದಾರಣೆಗೆ ಸಂಬಂಧಿಸಿದಂತೆ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕಕ್ಕೆ ‘ಕರೀನಾ ಕಪೂರ್ ಖಾನ್, ಪ್ರೆಗ್ನೆನ್ಸಿ ಬೈಬಲ್’ ಎಂದು ಶೀರ್ಷಿಕೆಯನ್ನು ನೀಡಿದ್ದರು. ಈ ಪುಸ್ತಕದಲ್ಲಿ ತಾಯಿಯಾದ ತಮ್ಮ ಅನುಭವ, ಗರ್ಭ ಧರಿಸಿದ್ದಾಗ ತೆಗೆದುಕೊಂಡ ಎಚ್ಚರಿಕೆಗಳು ಇನ್ನಿತರೆ ಅನುಭವವಗಳನ್ನು ಹಂಚಿಕೊಂಡಿದ್ದರು.
ಈ ಪುಸ್ತಕದ ಸಹಸ್ರಾರು ಪ್ರತಿಗಳು ಮಾರಾಟವಾಗಿದ್ದವು. ಕರೀನಾರ ಈ ಪ್ರಯತ್ನದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಗ ಇದೇ ಪುಸ್ತಕ ಅವರಿಗೆ ಸಂಕಷ್ಟ ತಂದಿದೆ. ಪುಸ್ತಕದಲ್ಲಿ ‘ಬೈಬಲ್’ ಎಂಬ ಪದ ಬಳಸಿರುವ ಬಗ್ಗೆ ವಕೀಲ ಕ್ರಿಸ್ಟೊಫರ್ ಆಂಟೊನಿ ಎಂಬುವರು ಕರೀನಾ ವಿರುದ್ಧ ಮಧ್ಯ ಪ್ರದೇಶ ಹೈಕೋರ್ಟ್ನಲ್ಲಿ ಮೊಕದ್ದಮೆ ಹೂಡಿದ್ದಾರೆ. ಕ್ರೈಸ್ತರ ಪವಿತ್ರ ಗ್ರಂಥ ಬೈಬಲ್ ಹೆಸರನ್ನು ತಮ್ಮ ಪುಸ್ತಕಕ್ಕೆ ಇರಿಸುವ ಮೂಲಕ ಕ್ರೈಸ್ತ ಧರ್ಮೀಯರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ನಟಿ ಕರೀನಾಗೆ ನೊಟೀಸ್ ಜಾರಿ ಮಾಡಿದ್ದು, ಉತ್ತರ ನೀಡುವಂತೆ ಸೂಚನೆ ನೀಡಿದೆ.