ಕಟಪಾಡಿ : ಜಗತ್ತಿನ ಅತ್ಯಂತ ಮೌಲ್ಯಯುತ ಮತ್ತು ದುಬಾರಿ ಮಾವಿನ ಹಣ್ಣು ಎಂದೇ ಪ್ರಸಿದ್ಧಿ ಪಡೆದಿರುವ ಜಪಾನ್ ಮೂಲದ ಮಿಯಾಝಕಿ ಮಾವಿನ ತಳಿ ಇದೀಗ ಕರಾವಳಿಯ ಕೃಷಿಕರೋರ್ವರ ಮನೆಯ ತಾರಸಿ ಯಲ್ಲಿ ಬೆಳೆದಿದೆ.
ತಾರಸಿ ಕೃಷಿ ಪ್ರಯೋಗದಲ್ಲಿ ಹೆಸರುವಾಸಿಯಾಗಿರುವ ಉಡುಪಿ ಶಂಕರಪುರದ ಜೋಸಫ್ ಲೋಬೋ ಅವರು ತಮ್ಮ ತಾರಸಿಯಲ್ಲಿ ಮಿಯಾಝಕಿ ಮಾವಿನ ಹಣ್ಣನ್ನು ಬೆಳೆದಿದ್ದಾರೆ. ಮೂರುವರೆ ವರ್ಷದ ಹಿಂದೆ ಕೇರಳದ ಕಣ್ಣೂರಿನಲ್ಲಿ ನಡೆದ ಕೃಷಿ ಮೇಳದಲ್ಲಿ 16,800 ರೂ. ಗೆ ಮಿಯಾಝಕಿ ತಳಿಯ ಮಾವಿನ ಗಿಡವನ್ನು ಜೋಸೆಫ್ ಅವರು ತಂದಿದ್ದರು. ಎರಡೂವರೆ ವರ್ಷದ ಹಿಂದೆ ಇದು ಹೂವು ಮಾತ್ರ ಬಿಡುತ್ತಿದ್ದ ಈ ಗಿಡದಲ್ಲಿ ಈಗ ಕೆಂಪು, ಸಾದಾ ಹಸುರು ಬಣ್ಣದ ಮಾವು ಬೆಳೆದಿದೆ. ಗಿಡದಲ್ಲಿ ಬಿಟ್ಟ ಒಂದೊಂದು ಹಣ್ಣು ಸುಮಾರು 600 ರಿಂದ 650 ಗ್ರಾಂ ಇದೆ.
ಮಿಯಾಝಕಿ ಮಾವು ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿರುತ್ತದೆ. ಮಾವು ಹಣ್ಣಾಗುವ ಹಂತ ತಲುಪಿದಾಗ ಬೆಂಕಿ ಜ್ವಾಲೆಯ ಬಣ್ಣಕ್ಕೆ ತಿರುಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಿಯಾಝಕಿ ಮಾವಿನ ಹಣ್ಣಿನ ಬೆಲೆ ಕೆ.ಜಿ.ಗೆ 2.3 ಲಕ್ಷ ರೂ.ನಿಂದ 2.7 ಲಕ್ಷ ರೂ. ವರೆಗೆ ಇದೆ. ರುಚಿಯಲ್ಲಿ ಮಲ್ಲಿಕಾ ತಳಿಯನ್ನು ಹೋಲುವ ಈ ಮಾವಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ ಇದೆ.
ಇನ್ನು ಕೃಷಿಕ ಜೋಸೆಫ್ ಲೋಬೋ ಅವರು ಕಡಿಮೆ ಜಾಗದಲ್ಲಿ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಮನೆಯ ಅಕ್ಕ ಪಕ್ಕ ಜಾಗ ಇಲ್ಲದೇ ಹೋದರೂ ಮನೆಗೆ ತಾರಸಿಯಲ್ಲಿ ಗಿಡಗಳನ್ನು ನೆಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.