ಕಾರು ಅಪಘಾತ: ಗಾಯಗೊಂಡ ಸ್ಥಿತಿಯಲ್ಲೇ ಸೆಲ್ಫಿಗೆ ಪೋಸ್ ನೀಡಿದ ಯುವತಿಯರು..!

ಕಾರು ಅಪಘಾತಗೊಂಡು ತೀವ್ರ ಸ್ವರೂಪದ ಗಾಯಗಳಾಗಿದ್ದರೂ ಜೊತೆಯಾಗಿ ಕೂತು ಸೆಲ್ಫಿಗೆ ಪೋಸ್‌ ಕೊಟ್ಟಿರುವ ವಿಚಿತ್ರ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.

ಮೆಕ್ಸಿಕನ್ ನಗರದ ಕ್ಯುರ್ನಾವಾಕಾದ ರಸ್ತೆಯಲ್ಲಿ ಐವರು ಯುವತಿಯರು ಕಾರಿನಲ್ಲಿ ಹೋಗುತ್ತಿರಬೇಕಾದರೆ ಲೋಮಾಸ್ ಡೆಲ್ ಮಿರಾಡೋರ್ ಮಾರ್ಗದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.

ಪರಿಣಾಮ ಕಾರು ನಜ್ಜುಗುಜ್ಜಾಗಿದೆ. ಇಬ್ಬರು ಯುವತಿಯರು ಕಾರಿನಿಂದ ಹೊರಬಿದ್ದು ತೀವ್ರತರದ ಗಾಯಗಳಾಗಿದೆ. ಪಾದಚಾರಿ ಮಾರ್ಗದಲ್ಲಿ ಇಬ್ಬರು ಯುವತಿಯರು ಬಿದ್ದಿದ್ದು, ಇತರೆ ಮೂವರು ಕಾರಿನಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ರಸ್ತೆಯಲ್ಲಿ ಬಿದ್ದಿದ್ದ ಇಬ್ಬರು ಯುವತಿಯರು ಗಾಯಗೊಂಡಿದ್ದರೂ ಅಪಘಾತವಾದ ಕಾರಿನ ಮುಂದೆ ಕುಳಿತು ಸೆಲ್ಫಿಗಾಗಿ ಪೋಸ್‌ ನೀಡಿದ್ದಾರೆ.

ಆಂಬ್ಯುಲೆನ್ಸ್ ಬರುವವರೆಗೆ ಇಬ್ಬರು ಸೆಲ್ಫಿಗೆ ಪೋಸ್‌ ನೀಡಿದ್ದಾರೆ ಎಂದು ವರದಿಯಾಗಿದೆ.

ಕಾರಿನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದರು ಎಂದು ಶಂಕಿಸಲಾಗಿದೆ. ಸೆಲ್ಫಿಗೆ ಪೋಸ್‌ ಕೊಡುತ್ತಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಸದ್ಯ ಮೆಕ್ಸಿಕನ್ ಅಧಿಕಾರಿಗಳು ಅಪಘಾತದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಇಂಟರ್‌ ನೆಟ್‌ ನಲ್ಲಿ ಸೆಲ್ಫಿಗೆ ಪೋಸ್‌ ಕೊಟ್ಟಿರುವ ಫೋಟೋ ವೈರಲ್‌ ಆಗಿದ್ದು, ಅನೇಕರು ಇಬ್ಬರು ಯುವತಿಯರ ವರ್ತನೆ ಕಂಡು ವ್ಯಂಗ್ಯವಾಡಿದ್ದಾರೆ.

Scroll to Top