ತುಳುನಾಡಿನಲ್ಲಿ ಇಂದಿನಿಂದ ಪತ್ತನಾಜೆ ಆರಂಭ : ಧಾರ್ಮಿಕ ಕಾರ್ಯಕ್ಕೆ ಬ್ರೇಕ್, ಕೃಷಿಯತ್ತ ಚಿತ್ತ, ಏನಿದರ ವಿಶೇಷತೆ

ಪರಶುರಾಮನ ಸೃಷ್ಟಿಯಾಗಿರುವ ತುಳುನಾಡಿನ ಸಂಸ್ಕೃತಿಯ ನೆಲೆಬೀಡು. ಈ ತುಳುನಾಡು ತನ್ನದೇ ಆದ ವೈಶಿಷ್ಟತೆಗಳನ್ನು ಒಳಗೊಂಡಿದ್ದು, ಇಲ್ಲಿನ ಆಚಾರ ವಿಚಾರಗಳು ಬೇರೆಲ್ಲೂ ನೋಡಲು ಸಾಧ್ಯವಿಲ್ಲ. ತುಳುನಾಡಿನ ವಿಶೇಷ ಆಚರಣೆಗಳಲ್ಲಿ ಪತ್ತನಾಜೆ ಕೂಡ ಒಂದಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಿಂದ ಹಿಡಿದು ದ.ಕ. ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ಬಾರ್ಕೂರು ಈ ಪ್ರಾಂತ್ಯದವರೆಗೆ ಈ ಪತ್ತನಾಜೆ ಆಚರಿಸಲಾಗುತ್ತದೆ.

ಪತ್ತನಾಜೆ ತುಳುನಾಡ್‌ದ ಜನೊಕುಲು ಮಾನ್ಪಿ ಗೌಜಿ, ಮಂಗಿಲೊಗ್ ಮಾಂತ ಗಡುತ್ತ ದಿನೊ. ಬೇಸ/ಬೇಶ ತಿಂಗೊಲುದ ಪತ್ತನೆ ದಿನೊನು ಪತ್ತನಾಜೆಂದ್ ಪನ್ಪೆರ್. ಪಗ್ಗು ತಿಂಗೊಲುದ ಕಡೆತ್ತಾನಿತ ಸಂಕ್ರಾತಿಡ್ದ್ ಬೊಕ್ಕದ ಪತ್ತ್ ದಿನೊತ್ತ ವಾಯ್ದೆಗ್ ಪತ್ತನಾಜೆ ಪನ್ಪುನು. ಇಡೀ ಸಮಾಜೊದ ಧಾರ್ಮಿಕ-ಸಾಂಸ್ಕೃತಿಕ ಕಜ್ಜೊಳೆಗ್ ಮಂಗಳೊ ಪನ್ಪುನ/ಪಾಡುನ ದಿನನೇ ಪತ್ತನಾಜೆ..

ತುಳುನಾಡಿನ ಪತ್ತನಾಜೆಯ ಆಚರಣೆಯು ಹೇಗಿರುತ್ತದೆ?

ಪ್ರತಿ ವರ್ಷ ಪತ್ತನಾಜೆಯು ಮೇ 24 ರಂದು ಆರಂಭಗೊಳ್ಳುತ್ತದೆ. ವೃಷಭ ಮಾಸ ಅಂದರೆ ತುಳುವಿನ ಪಂಚಾಂಗದಲ್ಲಿ ಬೇಶ ತಿಂಗಳು ಎಂದರ್ಥ. ಬೇಶ ತಿಂಗಳಿನಲ್ಲಿ ಬರುವ 10ನೇ ದಿನಕ್ಕೆ ಪತ್ತನಾಜೆ ಎನ್ನಲಾಗುತ್ತದೆ. ಈ ಪತ್ತನಾಜೆ ಆರಂಭಗೊಂಡ ಬಳಿಕ ಕರಾವಳಿ ಭಾಗದಲ್ಲಿ ಅಂಕ, ಆಯನ, ನೇಮ ಮುಂತಾದ ಧಾರ್ಮಿಕ ಉತ್ಸವಗಳು ನಡೆಯುವುದಿಲ್ಲ. ಅದಲ್ಲದೇ, ಯಕ್ಷಗಾನ ಮೇಳಗಳ ಕಲಾವಿದರು ಪ್ರದರ್ಶನ ಮುಗಿಸಿ ಪತ್ತನಾಜೆಯಂದು ಕಾಲಗೆಜ್ಜೆಯನ್ನು ಬಿಚ್ಚುತ್ತಾರೆ. ಪತ್ತನಾಜೆಯ ಬಳಿಕ ಮಳೆಗಾಲವು ಆರಂಭವಾಗುತ್ತದೆ ಎನ್ನುವುದು ತುಳುವರ ನಂಬಿಕೆ.

ಯಾವುದೇ ಧಾರ್ಮಿಕ ಕಾರ್ಯವು ನಡೆಯುವುದಿಲ್ಲ

ತುಳುನಾಡು ದೈವ ದೇವರುಗಳು ನೆಲೆಬೀಡು. ಹೀಗಾಗಿ ಇಲ್ಲಿ ಭೂತಗಳ ಕೋಲಗಳು ಇಲ್ಲಿ ನಡೆಯುತ್ತಲೇ ಇರುತ್ತದೆ. ಆದರೆ ತುಳುನಾಡಿನ ಜನರ ನಂಬಿಕೆಯ ಪ್ರಕಾರವಾಗಿ ಈ ಎಲ್ಲಾ ದೈವಗಳು ಪತ್ತನಾಜೆಯ ಬಳಿಕ ಘಟ್ಟಪ್ರದೇಶಕ್ಕೆ ತೆರಳುತ್ತದೆ ಎನ್ನಲಾಗುತ್ತದೆ. ಹೀಗಾಗಿ ಪತ್ತನಾಜೆಯ ಬಳಿಕ ಯಾವುದೇ ದೈವ ದೇವರ ಕಾರ್ಯಕ್ರಮಗಳನ್ನು ನಡೆಸುವುದಿಲ್ಲ. ದೀಪಾವಳಿ ಆರಂಭಗೊಂಡ ಬಳಿಕವಷ್ಟೇ ಧಾರ್ಮಿಕ ಕಾರ್ಯಗಳು ಹಾಗೂ ಉತ್ಸವಗಳು ನಡೆಯುತ್ತವೆ.

ಪತ್ತನಾಜೆ ಆಚರಣೆಯು ಆರಂಭಗೊಂಡಿದ್ದು ಏಕೆ?

ತುಳುನಾಡಿನವರು ಮಣ್ಣಿನ ಮಕ್ಕಳು. ಈ ಮಳೆಗಾಲದಲ್ಲಿ ಇಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿರುತ್ತದೆ. ಪತ್ತನಾಜೆಯ ಬಳಿಕ ಮಳೆಯು ಜೋರಾಗಿರುತ್ತದೆ. ಈ ಸಮಯದಲ್ಲಿ ಯಾವುದೇ ಜಾತ್ರೆ, ಅಂಕ ಆಯನ, ಉತ್ಸವಾದಿಗಳನ್ನು ನಡೆಸಲು ಸಾಧ್ಯವಾಗದು. ಮಳೆಗಾಲಕ್ಕೂ ಮುನ್ನ ಈ ಎಲ್ಲಾ ದೈವ ದೇವರ ಉತ್ಸವ ಜಾತ್ರೆಗಳನ್ನು ಮುಗಿಸಿಕೊಳ್ಳಲಾಗುತ್ತದೆ. ಈ ಪತ್ತನಾಜೆ ದಿನವನ್ನು ಉತ್ಸವಗಳ ಕೊನೆಯ ದಿನವಾಗಿರುತ್ತದೆ. ಅದಲ್ಲದೇ ಮನೋರಂಜನೆಗೆ ಬ್ರೇಕ್ ಹಾಕಿ, ಕೃಷಿ ಚಟುವಟಿಕೆ ಹಾಗೂ ಮಳೆಗಾಲಕ್ಕೆ ಬೇಕಾಗುವ ತರಕಾರಿ, ಅಕ್ಕಿ ದವಸಧಾನ್ಯಗಳನ್ನು ಸಂಗ್ರಹಿಸಡಲಾಗುತ್ತದೆ. ಈ ಸಮಯದಲ್ಲಿ ಕೃಷಿ ಚಟುವಟಿಕೆಯಲ್ಲಿ ಇಲ್ಲಿನ ಜನರು ನಿರತರಾಗುತ್ತಾರೆ. ಈ ಸಂಪ್ರದಾಯವನ್ನು ತುಳುನಾಡಿನ ಜನರು ಇಂದಿಗೂ ಮುಂದುವರೆಸಿಕೊಂಡು ಬರುತ್ತಿದ್ದಾರೆ.

Scroll to Top