ಇಳಕಲ್ ನಗರದಲ್ಲಿ ಅಚ್ಚರಿ ಘಟನೆ- ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ

ಬಾಗಲಕೋಟೆ : ಪ್ರಜ್ಞೆ ತಪ್ಪಿದ್ದ ಮಗು ಮೃತಪಟ್ಟಿದೆ ಎಂದು ಭಾವಿಸಿದ ಪೋಷಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು, ಅಷ್ಟರಲ್ಲಿ ಮಗು ಕೆಮ್ಮಿದ ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ ನಡೆದಿದೆ.

ಬಸವರಾಜ ಭಜಂತ್ರಿ ಹಾಗೂ ನೀಲಮ್ಮ ಎಂಬ ದಂಪತಿಯ ದ್ಯಾಮಣ್ಣ ಭಜಂತ್ರಿ ಎಂಬ 13 ತಿಂಗಳ ಹಸುಗೂಸು ಉಸಿರಾಟ ತೊಂದರೆ, ಹೃದಯ ಸಂಬಂಧಿ ಖಾಯಿಲೆ ಸೇರಿದಂತೆ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿತ್ತು. ಹುಟ್ಟಿದಾಗಿನಿಂದ ಮಗು ಸಮಸ್ಯೆ ಎದುರಿಸುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಮಗು ಬದುಕುವುದು ಕಷ್ಟ ಎಂದು ಹೇಳಿದ್ದರು. ಹೀಗಾಗಿ ಮಗುವನ್ನು ಪೋಷಕರು ಆಸ್ಪತ್ರೆಯಿಂದ ವಾಪಸ್ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಮಗು ಪ್ರಜ್ಞೆ ತಪ್ಪಿತ್ತು.

ಮಗು ಮೃತಪಟ್ಟಿದೆ ಎಂದು ಭಾವಿಸಿದ ಪೋಷಕರು ಸಂಬಂಧಿಕರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದರು. ಸಂಬಂಧಿಕರೆಲ್ಲ ಮನೆಗೆ ಆಗಮಿಸಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಲಾಗುತ್ತಿತ್ತು. ಅಷ್ಟರಲ್ಲಿ ಮಗು ಕೆಮ್ಮಿದೆ. ಸತ್ತ ಮಗು ಪುನಃ ಬದುಕಿದೆ. ಸದ್ಯ ಇಳಕಲ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ವೈದ್ಯರು ಹೇಳುವುದೇನು?

ಮಗು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಬದುಕುವುದು ಕಷ್ಟಸಾಧ್ಯ ಎಂದಷ್ಟೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯ ವೈದ್ಯರು ಪೋಷಕರಿಗೆ ತಿಳಿಸಿದ್ದರು. ಹೀಗಾಗಿ ಪೋಷಕರು ಮಗುವನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದಾರೆ. ಆದರೆ, ಮಗು ಮೃತಪಟ್ಟಿದೆ ಎಂದು ಯಾವೊಬ್ಬ ವೈದ್ಯರೂ ಘೋಷಿಸಿರಲಿಲ್ಲ. ಮಗುವಿಗೆ ಪ್ರಜ್ಞೆ ತಪ್ಪಿತ್ತು ಅಷ್ಟೆ. ಸದ್ಯ ಮಗುವನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಚಿಕಿತ್ಸೆ ನೀಡುತ್ತಿದ್ದೇವೆ. ನಮ್ಮ ಪ್ರಯತ್ನ ನಾವು ಮಾಡುತ್ತಿದ್ದೇವೆ. ಆದರೆ, ಆರೋಗ್ಯ ಸ್ಥಿತಿಯ ಬಗ್ಗೆ ಭರವಸೆ ನೀಡುವುದು ಕಷ್ಟ ಎಂದು ಇಳಕಲ್ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಮಗು ಮೃತಪಟ್ಟಿದೆ ಎಂದು ಕುಟುಂಬದವರು ಭಾವಿಸಿದ್ದಾರಷ್ಟೇ. ಇಲ್ಲಿಗೆ ಕರೆದುಕೊಂಡು ಬರುವಾಗ ಮಗುವಿನ ಉಸಿರಾಟ ಸಹಜವಾಗಿಯೇ ಇತ್ತು. ಮಗುವಿಗೆ ಪ್ರಜ್ಞೆ ತಪ್ಪಿದ್ದನ್ನೇ ಪೋಷಕರು ಮೃತಪಟ್ಟಿದೆ ಎಂದು ಭಾವಿಸಿದ್ದಂತಿದೆ ಎಂದು ವೈದ್ಯರು ತಿಳಿಸಿದ್ದಾರೆ.

Scroll to Top