ಉಡುಪಿ, ಮೇ 25: ಬಿಜೆಪಿಯಿಂದ ಮಾಜಿ ಶಾಸಕ ರಘುಪತಿ ಭಟ್ ಅವರನ್ನು ಉಚ್ಛಾಟನೆ ಮಾಡಿ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಇಂದು ಆದೇಶ ಹೊರಡಿಸಿದ್ದಾರೆ.
ರಘುಪತಿ ಭಟ್ ಅವರು ಪಕ್ಷದ ಸೂಚನೆಯನ್ನು ಕಡೆಗಣಿಸಿ ಪ್ರಸಕ್ತ ವಿಧಾನಪರಿಷತ್ ಚುನಾವಣೆಗೆ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿ, ಪಕ್ಷದ ಮುಜುಗರಕ್ಕೆ ಕಾರಣರಾಗಿದ್ದೀರಿ. ಇದು ಪಕ್ಷದ ಶಿಸ್ತು ಉಲ್ಲಂಘನೆಯಾಗಿದೆ. ಆದ್ದರಿಂದ ರಘುಪತಿ ಭಟ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಲಾಗುತ್ತಿದೆ ಎಂದು ಲಿಂಗರಾಜು ಅವರು ಹೊರಡಿಸಿದ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.
ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಬಿಜೆಪಿ-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್ ಅವರು ಸ್ವರ್ಧಿಸುತ್ತಿದ್ದಾರೆ.