ಮೇ 31ರಂದೇ ರಾಜ್ಯಕ್ಕೆ ಮುಂಗಾರು ಪ್ರವೇಶ

ಬೆಂಗಳೂರು, ಮೇ 25: ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆ ಸುರಿಯುತ್ತಿದ್ದು, ನೈರುತ್ಯ ಮುಂಗಾರು ಮಳೆ ಕೂಡಾ ಇದೇ ಮೇ 31 ರಂದು ಕೇರಳ ಮೂಲಕ ಕರ್ನಾಟಕ ರಾಜ್ಯ ಪ್ರವೇಶಿಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಕಳೆದ ಬಾರಿ ಮಳೆ ಕೊರತೆಯಿಂದಾಗಿ ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳು ಭೀಕರ ಬರಗಾಲ ಎದುರಿಸಿದ್ದವು. ಆದರೆ, ಈ ಬಾರಿ ಉತ್ತಮವಾದ ಮುಂಗಾರು ಮಳೆಯಾಗುವ ನಿರೀಕ್ಷೆ ಇದ್ದು, ಆಗಸ್ಟ್‌ ಮತ್ತು ಸೆಪ್ಟಂಬರ್‌ ತಿಂಗಳುಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಕರಾವಳಿ ಭಾಗಕ್ಕೆ ಮುಂಗಾರು ಮಾರುತಗಳು ಜೂನ್‌ 2 ಅಥವಾ 3ಕ್ಕೆ ಪ್ರವೇಶ ಮಾಡುವ ನಿರೀಕ್ಷೆ ಇದೆ.

ಈ ನಡುವೆ ಮೇ 26ರಂದು ಸಂಜೆ ರೆಮಲ್ ಚಂಡಮಾರುತ ಬಾಂಗ್ಲಾದೇಶ ಕರಾವಳಿ ಮೂಲಕ ಭಾರತದ ಈಶಾನ್ಯ ರಾಜ್ಯಗಳಿಗೆ ಅಪ್ಪಳಿಸುವ ಸಾಧ್ಯತೆಯಿದೆ ಎಂದೂ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದಲ್ಲದೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಒಂದು ವಾರದ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಉತ್ತರ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

Baravanige News

Translate »

You cannot copy content from Baravanige News

Scroll to Top