ಶಾಂತವಾಗುತ್ತಿದೆ ರೆಮಾಲ್ ಚಂಡಮಾರುತ; ಪಶ್ಚಿಮ ಬಂಗಾಳ, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ

ಕೋಲ್ಕತ್ತಾ: ಬಂಗಾಳಕೊಲ್ಲಿಯಲ್ಲಿ ತೀವ್ರ ಆತಂಕ ಹುಟ್ಟಿಸಿದ್ದ ರೆಮಾಲ್ ಚಂಡಮಾರುತ ಶಾಂತವಾಗುತ್ತಿದೆ. ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ಚಂಡಮಾರುತದ ವೇಗ ನಿಧಾನವಾಗಿ ಕುಸಿಯುತ್ತಿದೆ. ಇಂದು ರಾತ್ರಿ ಹೊತ್ತಿಗೆ ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್‌ನಿಂದ 50-70 ಕಿಲೋಮೀಟರ್‌ಗೆ ಕುಸಿಯುವ ಸಾಧ್ಯತೆಯಿದೆ.

ತಡರಾತ್ರಿ ಬಾಂಗ್ಲಾದೇಶ, ಪಶ್ಚಿಮ ಬಂಗಾಳ ಕರಾವಳಿ ಗಡಿಯ ತೀರಕ್ಕೆ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳ (West Bengal), ಒಡಿಶಾ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ ಅಪಾರ ಹಾನಿಯುಂಟಾಗಿದೆ. ಕೋಲ್ಕತ್ತಾದಲ್ಲಿ ಮೆಟ್ರೋ ಮತ್ತು ಹಲವು ರೈಲುಗಳ ಸಂಚಾರ ರದ್ದಾಗಿದೆ. ಪಶ್ಚಿಮ ಬಂಗಳಾದಲ್ಲಿ ಇಬ್ಬರು, ಬಾಂಗ್ಲಾದಲ್ಲಿ ಏಳು ಮಂದಿ ಬಲಿ ಆಗಿದ್ದಾರೆ.

ಚಂಡಮಾರುತ ದುರ್ಬಲಗೊಂಡ ನಂತರ ಕೋಲ್ಕತ್ತಾದಲ್ಲಿ ವಿಮಾನಸೇವೆಗಳು ಪುನಾರಂಭಗೊಂಡಿವೆ. ಮಂಗಳವಾರ ಸಂಜೆಯವರೆಗೂ ಗಾಳಿ ಮಳೆಯ ಪರಿಸ್ಥಿತಿ ಇರಲಿದೆ. ಸದ್ಯ ಚಂಡಮಾರುತ ಅಸ್ಸಾಂ, ಮೇಘಾಲಯದತ್ತ ಚಲಿಸುತ್ತಿದೆ.

ಕೋಲ್ಕತ್ತಾದಿಂದ ಪೂರ್ವಕ್ಕೆ 90 ಕಿಲೋಮಿಟರ್ ದೂರದಲ್ಲಿ ರೆಮಾಲ್ ಕೇಂದ್ರೀಕೃತವಾಗಿದೆ. ಈ ಹಿಂದೆ ತೀವ್ರ ಅನಾಹುತ ಉಂಟು ಮಾಡಿದ್ದ ಆಂಫನ್‌ಗೆ ಹೋಲಿಸಿದ್ರೆ ರೆಮಾಲ್ ಪ್ರಭಾವ ಕಡಿಮೆ ಎಂದು ವರದಿಯಾಗಿದೆ.

You cannot copy content from Baravanige News

Scroll to Top