ಶಾಲೆ ಆರಂಭ..! ನಿಮ್ಮ ಮಕ್ಕಳು ಶಾಲೆಗೆ ಹೋಗುವಾಗ ಅಳುತ್ತಾರಾ? ಹೀಗೆ ಮಾಡಿ

ಬೆಂಗಳೂರು: ಬರೋಬ್ಬರಿ ಎರಡು ತಿಂಗಳುಗಳ ಬೇಸಿಗೆ ರಜೆ ಮುಗಿದು ಶಾಲೆ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ. ರಾಜ್ಯದಲ್ಲಿ ಶಾಲೆಗಳು ಮತ್ತೆ ಪುನರಾರಂಭಗೊಳ್ಳಲಿದೆ. ಆದರೆ ಮಕ್ಕಳು ಇನ್ನೂ ರಜೆಯ ಮೂಡ್‌ನಲ್ಲೇ ಇದ್ದಾರೆ. ಇಷ್ಟು ದಿನ ತಂದೆ ತಾಯಿಯ ಜೊತೆಗೆ ಇರುತ್ತಿದ್ದ ಮಕ್ಕಳಿಗೆ ಶಾಲೆ ಆರಂಭ ಎಂದರೆ ಮುಖವು ಬಾಡಿಕೊಳ್ಳುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ಕೂಡಲೇ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿ ಅಳುವ ಮಕ್ಕಳೇ ಹೆಚ್ಚು.

ಇನ್ನು ಕೆಲವು ಮಕ್ಕಳು ನನಗೆ ಹುಷಾರಿಲ್ಲ ಎಂದು ನೆಪ ಹೇಳಿ ಶಾಲೆಗೆ ಹೋಗುವುದರಿಂದ ತಪ್ಪಿಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಮಕ್ಕಳ ಮನವೊಲಿಸಿ ಶಾಲೆಗೆ ಬಿಟ್ಟು ಬರುವುದು ಹೆತ್ತವರಿಗಂತೂ ಬಲು ಕಷ್ಟದ ಕೆಲಸ. ಅದರಲ್ಲೂ ಮೊದಲ ದಿನ ನರ್ಸರಿ, ಎಲ್‌ಕೆಜಿ, ಯುಕೆಜಿ ಶಾಲೆಗೆ ಹೋಗುವ ಮಕ್ಕಳ ಅಳು ಅಂತೂ ಯಾರಿಗೂ ಬೇಡ. ಹೀಗಾಗಿ ನಿಮ್ಮ ಮಕ್ಕಳು ಮೊದಲ ದಿನ ಶಾಲೆಗೆ ಹೋಗಲು ಹಿಂದೇಟು ಹಾಕಿ ಅಳುತ್ತ ಕೂತರೆ, ಪೋಷಕರೇ ನೀವು ಹೀಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಿ.

ಶಾಲೆಯ ಬಗೆಗಿನ ಭಯವನ್ನು ನಿವಾರಿಸಿ:
ತಂದೆ ತಾಯಿಯರು ಮೊದಲು ಮಾಡಬೇಕಾದ ಕೆಲಸವೆಂದರೆ ಶಾಲೆ ಬಗೆಗಿನ ಭಯವನ್ನು ಕಡಿಮೆ ಮಾಡುವುದು. ಶಾಲೆಯ ಬಗ್ಗೆ ಒಳ್ಳೆಯದನ್ನು ಹೇಳಿ ಮಕ್ಕಳು ಶಾಲೆಯನ್ನು ಪ್ರೀತಿಸುವಂತೆ ಮಾಡಬೇಕು.

ಟಿಫನ್ ಬಾಕ್ಸ್ ಗೆ ಮಕ್ಕಳ ಇಷ್ಟದ ತಿಂಡಿ ತಿನಿಸುಗಳನ್ನು ಹಾಕಿಕೊಡಿ:
ಮಕ್ಕಳಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ನೀಡುವುದರಿಂದ ಮಕ್ಕಳನ್ನು ಸ್ವಲ್ಪ ಸಮಾಧಾನ ಪಡಿಸಬಹುದು. ಇಷ್ಟದ ತಿಂಡಿ ತಿನಿಸುಗಳನ್ನು ಟಿಫನ್ ಬಾಕ್ಸ್ ಗೆ ಹಾಕಿ ಕೊಟ್ಟು, ಮಧ್ಯಾಹ್ನ ಸ್ನೇಹಿತರಿಗೆ ಕೊಟ್ಟು ತಿನ್ನು ಎಂದೇಳಿದರೆ, ಖುಷಿ ಖುಷಿಯಿಂದ ಶಾಲೆಗೆ ಹೋಗಲು ಮನಸ್ಸು ಮಾಡುತ್ತಾರೆ.

ಹೊಸ ಬಟ್ಟೆ ಬ್ಯಾಗ್‌, ಚಪ್ಪಲಿ ಕೊಡಿಸಿ ಖುಷಿ ಪಡಿಸಿ:
ಮಕ್ಕಳು ಹೊಸ ಬಟ್ಟೆ, ಬ್ಯಾಗ್‌, ಛತ್ರಿ ಇದನ್ನೆಲ್ಲಾ ತಂದುಕೊಟ್ಟರೆ ಶಾಲೆಗೆ ಹೋಗುತ್ತಾರೆ. ಹೀಗಾಗಿ ಅವರಿಗಿಷ್ಟವಾಗುವ ಬ್ಯಾಗ್‌, ಚಪ್ಪಲಿ ಕೊಡಿಸಿ ಮಕ್ಕಳನ್ನು ಶಾಲೆಗೆ ಹೋಗುವಂತೆ ಮಾಡಬಹುದು.

ಹುಷಾರಿಲ್ಲ ಎಂದೇಳಿದರೆ ಆರೋಗ್ಯವನ್ನೊಮ್ಮೆ ಗಮನಿಸಿ:
ಶಾಲೆಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಹುಷಾರಿಲ್ಲ ಎಂದು ನೆಪ ಹೇಳಿ ರಜೆ ಹಾಕುವ ಮಕ್ಕಳು ಇದ್ದಾರೆ. ಆದರೆ ಈ ವೇಳೆಯಲ್ಲಿ ನಿಮ್ಮ ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಿ. ಒಂದು ವೇಳೆ ಹುಷಾರಿಲ್ಲವೆಂದರೆ ರಜೆ ಹಾಕುವುದು ಒಳಿತು.

ಶಿಕ್ಷಕರ ಜೊತೆ ಮಾತನಾಡಿ:
ಮಗು ಶಾಲೆಗೆ ಹೋಗಲು ಹಿಂಜರಿಯುವುದರ ಬಗ್ಗೆ ಶಿಕ್ಷಕರ ಜೊತೆಗೆ ಮಾತನಾಡಿ. ಕೆಲವು ದಿನಗಳ ಕಾಲ ನೀವೇ ಮಗುವನ್ನು ಶಾಲೆಗೆ ಬಿಟ್ಟು ಬನ್ನಿ. ಮಗು ಶಾಲೆಯಲ್ಲಿ ಎಲ್ಲಾ ಮಕ್ಕಳ ಜೊತೆಗೆ ಬೆರೆಯುತ್ತದೆಯೇ, ಆಟ ಪಾಠದಲ್ಲಿ ತೊಡಗಿಕೊಳ್ಳುತ್ತಾರೆಯೇ ಎಂದು ತಿಳಿದುಕೊಳ್ಳಿ.

ಗದರಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡಬೇಡಿ:
ಶಾಲೆಯೆಂದರೆ ಮಕ್ಕಳು ಹೆದರುವುದಕ್ಕೆ ಮುಖ್ಯ ಕಾರಣವೇ ಹೋಮ್ ವರ್ಕ್. ಬರೆಯಲು, ಓದಲು ತುಂಬಾ ಇರುತ್ತದೆ ಎನ್ನುವ ಕಾರಣಕ್ಕೆ ಶಾಲೆಗೆ ಹೋಗಲು ಹಿಂದೇಟು ಹಾಕುತ್ತಾರೆ. ಈ ವೇಳೆ ಹೆತ್ತವರು ಮಕ್ಕಳನ್ನು ಗದರಿಸುವುದಲ್ಲ. ಸಮಾಧಾನ ಪಡಿಸಿ ಶಾಲೆಗೆ ಕಳುಹಿಸಿಕೊಡಿ.

You cannot copy content from Baravanige News

Scroll to Top