ಉಡುಪಿ: ಸತ್ಯವಾಯಿತು ದೈವದ ನುಡಿ, ಕೊಲೆ ಆರೋಪಿ ಶರಣಾಗತಿ : ಮೇ.30ರವರೆಗೆ ಪೊಲೀಸ್ ಕಸ್ಟಡಿಗೆ

ಕಾಪು, ಮೇ 29: ಕಳೆದ ವರ್ಷ ಫೆ. 5ರಂದು ಪಾಂಗಾಳದಲ್ಲಿ ಡ್ರ‍್ಯಾಗನ್ ಇರಿತಕ್ಕೊಳಗಾಗಿ ಹತ್ಯೆಗೀಡಾಗಿದ್ದ ಪಾಂಗಾಳ ಮಂಡೇಡಿಯ ಶರತ್ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯೋಗೀಶ್ ಆಚಾರ್ಯನನ್ನು ಮೇ 30ರ ವರೆಗೆ ಕಾಪು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಶರತ್ ಶೆಟ್ಟಿ ಕೊಲೆ ಬಳಿಕ ಆರೋಪಿ ಯೋಗೀಶ್ ಒಂದು ವರ್ಷ ಮೂರು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ. ಇದೀಗ ಆತ ತಾನಾಗಿಯೇ ಮೇ ೨೩ರಂದು ಉಡುಪಿಯ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಹಾಜರಾಗಿ ಶರಣಾಗಿದ್ದನು. ಬಳಿಕ ವಿಚಾರಣೆ ನಡೆಸಿದ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಪ್ರಕರಣದ ಪ್ರಸ್ತುತ ತನಿಖಾಧಿಕಾರಿಯಾಗಿರುವ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಅವರು ಆರೋಪಿ ಯೋಗೀಶ್‌ನ್ನು ನ್ಯಾಯಾಂಗ ಬಂಧನದಿಂದ ಹೆಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿರುತ್ತಾರೆ.

ಆರೋಪಿ ಯೋಗೀಶ್‌ನೊಂಡಿಗೆ ಪೊಲೀಸರು ವಿವಿಧೆಡೆ ಸ್ಥಳ ಮಹಜರು ನಡೆಸಿದ್ದಾರೆ. ತನಿಖೆಗಾಗಿ ಆರೋಪಿಯ ಮನೆ, ಹತ್ಯೆ ನಡೆದಿದ್ದ ಪರಿಸರ, ಪಾಂಗಳ ಹೊಳೆ ಸೇರಿ ವಿವಿಧೆಡೆ ಕರೆದೊಯ್ದಿದ್ದಾರೆ. ಆರೋಪಿ ಯೋಗೀಶ್ ಶರತ್ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

You cannot copy content from Baravanige News

Scroll to Top