ದೈವದ ಕಾರ್ಯನಿಮಿತ್ತ ಕಾಡಿಗೆ ತೆರಳಿದ್ದ 82 ವರ್ಷದ ಹಿರಿಯ ಜೀವ ಕಾಡಿನಲ್ಲಿ ಏಕಾಏಕಿ ಕಣ್ಮರೆಯಾಗುತ್ತಾರೆ. ಕುಟುಂಬಸ್ಥರು, ಊರಿನವರು, ದಟ್ಟಾರಣ್ಯದಲ್ಲಿ ಹಗಲು ರಾತ್ರಿ ಎನ್ನದೆ ಸತತ ಹುಡುಕಾಟ ನಡೆಸಿ 6 ದಿನಗಳ ಬಳಿಕ ಆ ಹಿರಿಯ ಜೀವ ದಟ್ಟ ಕಾನನದ ನಡುವೆ ಪತ್ತೆಯಾಗುತ್ತಾರೆ.
ದೈವದ ಕಾರ್ಯನಿಮಿತ್ತ ಕಾಡಿಗೆ ತೆರಳಿ ನಾಪತ್ತೆ ಆಗಿದ್ದ ವೃದ್ಧ
ದಟ್ಟವಾಡ ಕಾಡಿನಲ್ಲಿ ಆಹಾರವಿಲ್ಲದೇ ಆರು ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ, ಪವಾಡ ರೀತಿ ಬದುಕಿ ಬಂದ ವ್ಯಕ್ತಿ ಹೆಸರು ವಾಸು ರಾಣ್ಯ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಐಂಗುಡ ನಿವಾಸಿ. ಮೇ.21 ರಂದು ಮುಂಜಾನೆ ಕೈಯಲ್ಲಿ ಕತ್ತಿಹಿಡಿದು ಮನೆಯ ಪಕ್ಕದ ಕಾಡಂಚಿನಲ್ಲಿರುವ ದೈವಸ್ಥಾನಕ್ಕೆ ತೆರಳಿ ಅಲ್ಲಿಂದ ಕಾಡಿಗೆ ಹೋದವರು ಮರಳಿ ಬಂದಿದ್ದು, ಬರೋಬ್ಬರಿ ಆರು ದಿನಗಳ ಬಳಿಕ.. ಇದು ಅಚ್ಚರಿ ಎನಿಸಿದ್ರೂ ಅದು ಸತ್ಯ.
82 ವರ್ಷ ವಯಸ್ಸಿನ ಇವರು, ಮನೆಯ ಮತ್ತು ಊರಿನ ದೈವಗಳ ಚಾಕರಿ ಸೇವೆ ಮಾಡುತ್ತ ಜೊತೆಗೆ ಕೃಷಿ ಮಾಡಿಕೊಂಡಿದ್ದಾರೆ. ಮೇ.21 ರಂದು ಬೆಳಿಗ್ಗೆ ಕೈಯಲ್ಲಿ ಕತ್ತಿ ಹಿಡಿದು ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಅವರ ಮನೆಯವರು ಸುಮ್ಮನಿದ್ದರು. ಆದ್ರೆ ಎಷ್ಟು ಹೊತ್ತಾದ್ರೂ ಅವರು ವಾಪಸ್ ಬರದಿದ್ದಾಗ ಮನೆಯವರು ಆತಂಕಗೊಂಡಿದ್ದಾರೆ. ಧರ್ಮಸ್ಥಳದ ಶೌರ್ಯ ತಂಡ ಮತ್ತು ಸ್ಥಳೀಯರ ಸಹಾಯದಿಂದ ಹುಟುಕಾಟ ನಡೆಸಿದ್ದಾರೆ. ಒಂದಲ್ಲ, ಎರಡಲ್ಲ ಐದು ದಿನಗಳ ಕಾಲ ಹುಡುಕಾಟ ನಡೆಸಿದ್ರೂ ಅವರ ಸುಳಿವೇ ಸಿಕ್ಕಿರಲಿಲ್ವಂತೆ.
ಕೂ ಕೂ ಶಬ್ಧದ ಜಾಡು ಹಿಡಿದು ಹೊರಟಾಗ ವಾಸುರಾಣ್ಯ ಪತ್ತೆ
ಸುಮಾರು ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ರಾಣ್ಯ ಪತ್ತೆಯಾಗಿರಲಿಲ್ಲ. ಮೇ.26 ರಂದು ಬೆಳಗ್ಗೆ ಮನೆಯವರು ಆಡು ಮೇಯಿಸಲು ಗುಡ್ಡೆಗೆ ತೆರಳಿದ್ದಾರೆ. ಆಗ ಕೂ…ಕೂ…ಎಂಬ ಶಬ್ದ ಕೇಳಿ ಬಂದಿದೆ. ಇದರ ಜಾಡು ಹಿಡಿದು ಸ್ಥಳೀಯರು ಮತ್ತು ಶೌರ್ಯ ವಿಪತ್ತು ತಂಡದವರು ಹುಡುಕಾಟ ನಡೆಸಿದ್ದಾರೆ. ಆಗ ಬಂಡಿಹೊಳೆ ಕಾಡಿನ ಸುಮಾರು 3 ಕಿ.ಮೀ. ದೂರದಲ್ಲಿ ವಾಸು ರಾಣ್ಯ ಪತ್ತೆಯಾಗಿದ್ದಾರೆ. ಬೃಹತ್ ಮರದ ಕೆಳಗೆ ಕಾಡಿನ ಮರಗಳ ತರಗೆಲೆಗಳ ಮೇಲೆ ಬಳಲಿದವರ ರೀತಿ ವಾಸು ಪತ್ತೆಯಾಗಿದ್ದಾರೆ.
ಪವಾಡ ಸದೃಶ್ಯ ಎಂಬಂತೆ ಕಾಡಿನಿಂದ ಬದುಕಿ ಬಂದ ವಾಸು ಅವರ ಮಾತು ಕೇಳಿ, ಮನೆಯವರು ಮತ್ತು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಬಳಿಕ ಏನಾಯ್ತು ಅನ್ನೋದು ಗೊತ್ತಿಲ್ಲ ಎನ್ನುತ್ತಿದ್ದಾರೆ ವಾಸು. ವಾಸು ಅವರನ್ನು ಕಾಡಿನಲ್ಲಿ 6 ದಿನ ರಕ್ಷಣೆ ಮಾಡಿದ್ದೇ ಆ ಊರಿನ ದೈವಗಳು ಎಂಬ ನಂಬಿಕೆ ಜನರಲ್ಲಿ ಮೂಡಿದೆ.