ಚೆನ್ನೈ : ನನ್ನ ತಂದೆ ಕುಪ್ಪುಸ್ವಾಮಿ, ಕರುಣಾನಿಧಿಯಾಗಿದ್ದರೆ ಗೆಲ್ಲುತ್ತಿದ್ದೆ ಎಂದ ತಮ್ಮ ಸೋಲನ್ನು ಅಣಕಿಸಿದವರಿಗೆ ಅಣ್ಣಾಮಲೈ ತಿರುಗೇಟು ನೀಡಿದ್ದಾರೆ. ಯಮತ್ತೂರಿನಲ್ಲಿ ಗೆಲುವಿನ ನಿರೀಕ್ಷೆಯಲ್ಲಿದ್ದ ಅಣ್ಣಾಮಲೈ ಅವರಿಗೆ ಸೋಲಾಗಿರುವುದಕ್ಕೆ ಇದೀಗ ಡಿಎಂಕೆ ನಾಯಕಿ ಮಾಜಿ ಸಿಎಂ ಕರುಣಾನಿಧಿ ಪುತ್ರಿ ಕನ್ನಿಮೋಳಿ ಕುಹಕವಾಡಿದ್ದಕ್ಕೆ ತಿರುಗೇಟು ನೀಡಿದ ಅಣ್ಣಾಮಲೈ ನನ್ನ ತಂದೆ ಕರುಣಾನಿದಿಯಾಗಿದ್ದರೆ ನಾನು ಸುಲಭದಲ್ಲಿ ಗೆಲ್ಲುತ್ತಿದ್ದೆ ಎಂದಿದ್ದಾರೆ.
ಭಾರಿ ಆತ್ಮವಿಶ್ವಾಸದೊಂದಿಗೆ ಅಖಾಡಕ್ಕಿಳಿದಿದ್ದ ಅಣ್ಣಾಮಲೈ ಭಾರಿ ಅಂತರದಿಂದ ಸೋಲು ಕಂಡಿದ್ದಾರೆ. ಇದನ್ನು ಕನ್ನಿಮೋಳಿ ವ್ಯಂಗ್ಯವಾಡಿದ್ದರು. ಈ ಕುರಿತು ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ತಂದೆ ಕರುಣಾನಿಧಿಯಾಗಿದ್ದರೆ ನಾನು ಗೆಲ್ಲುತ್ತಿದ್ದೆ. ಆದರೆ ನನ್ನ ತಂದೆ ಕುಪ್ಪುಸ್ವಾಮಿ. ಹೀಗಾಗಿ ಗೆಲುವಿಗೆ ಇನ್ನಷ್ಟು ಪರಿಶ್ರಮ ಬೇಕಿದೆ. ಗೆಲುವಿಗೆ ಕೆಲ ಸಮಯ ತೆಗೆದುಕೊಳ್ಳಲಿದೆ ಎಂದು ಅಣ್ಣಾಮಲೈ ಹೇಳಿದ್ದಾರೆ.
ಇದೇ ವೇಳೆ ಅಣ್ಣಾಮಲೈ ಮಹತ್ವದ ಸಂದೇಶವನ್ನೂ ನೀಡಿದ್ದಾರೆ. ಈ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವೋಟ್ ಶೇರ್ ಶೇಕಡಾ 11ಕ್ಕೆ ಏರಿಕೆಯಾಗಿದೆ. ತಮಿಳುನಾಡಿನಲ್ಲಿ ಬಿಜೆಪಿಯನ್ನು ನೋಟಾ ಪಾರ್ಟಿ ಎಂದು ಹೀಯಾಳಿಸುತ್ತಿದ್ದರು. ಈ ಚುನಾವಣೆಯಲ್ಲಿ ತಮಿಳುನಾಡು ಬಿಜೆಪಿಯತ್ತ ವಾಲುತ್ತಿರುವುದು ಸ್ಪಷ್ಟವಾಗಿದೆ. ಇದೀಗ ಹಲವರು ನಮ್ಮ ಸೋಲನ್ನು ಸಂಭ್ರಮಿಸುತ್ತಿದ್ದಾರೆ. ಆದರೆ 2026ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ ಎಂದು ಎಚ್ಚರಿಸಿದ್ದಾರೆ.