ಉಡುಪಿ : ಲೋಕಸಭಾ ಫಲಿತಾಂಶ ಬೆನ್ನಲ್ಲೇ ಉಡುಪಿ ಕಾಂಗ್ರೆಸ್ ನಲ್ಲಿ ಗೋ ಬ್ಯಾಕ್ ಅಭಿಯಾನ ಶುರುವಾಗಿದೆ. ಕರಾವಳಿಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲು ಕಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿಗಳ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಉಡುಪಿಯ ಕೈ ಕಾರ್ಯಕರ್ತರು ʼಗೋ ಬ್ಯಾಕ್ʼ ಅಭಿಯಾನ ನಡೆಸುತ್ತಿದ್ದಾರೆ.
ಸಮಸ್ಯೆ ಆದಾಗ ನೀವು ಬರೋದೆ ಇಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕಾರ್ಯಕರ್ತರು ಕಿಡಿಕಾರಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸುವಂತೆ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿರುವ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಗೋ ಬ್ಯಾಕ್ ಪೋಸ್ಟರ್ ವೈರಲ್ ಮಾಡುತ್ತಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ಗೂ ಟಿಕೆಟ್ ನೀಡಲಾಗಿತ್ತು. ಹೀಗಾಗಿ ಪುತ್ರ ಮೃಣಾಲ್ ಗೆ ಟಿಕೆಟ್ ಸಿಕ್ಕಿದ ಬಳಿಕ ಉಸ್ತುವಾರಿ ಸಚಿವೆ ಲಕ್ಷ್ಮೀ ಇತ್ತ ಪಕ್ಷದ ಕಾರ್ಯಕರ್ತರ ಕೈಗೂ ಸಿಕ್ಕಿಲ್ಲ , ಜಿಲ್ಲೆಯ ಜನರ ಕೈಗೂ ಸಿಕ್ಕಿಲ್ಲ. ಸಚಿವೆ ಬೆಳಗಾವಿಯಲ್ಲಿ ಸುತ್ತುತ್ತಿದ್ದರೇ ಹೊರತು ಒಮ್ಮೆಯೂ ಉಡುಪಿ ಕ್ಷೇತ್ರಕ್ಕೆ ಭೇಟಿ ನೀಡಲಿಲ್ಲ. ಉಡುಪಿ-ಚಿಕ್ಕಮಂಗಳೂರು ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಪ್ರಕಾಶ್ ಹೆಗ್ಡೆಯವರ ಪ್ರಚಾರ ಸಮಯದಲ್ಲೂ ಒಂದು ಬಾರಿ ಇತ್ತ ಕಡೆ ಮುಖ ಮಾಡಿಲ್ಲ. ಇದಕ್ಕೆಲ್ಲಾ ಅವರ ಪುತ್ರ ವಾತ್ಸಲ್ಯವೇ ಕಾರಣ ಎಂದು ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.