ಲೋಕಸಭಾ ಚುನಾವಣೆ ಬಳಿಕ ಎನ್‌ಡಿಎ ಮೈತ್ರಿಕೂಟದ ಮಹತ್ವದ ಸಭೆ : ಸತತ 3ನೇ ಬಾರಿಗೆ ಎನ್‌ಡಿಎ ನಾಯಕನಾಗಿ ನರೇಂದ್ರ ಮೋದಿ

ನವದೆಹಲಿ : ಲೋಕಸಭಾ ಚುನಾವಣೆ ಬಳಿಕ ಎನ್‌ಡಿಎ ಮೈತ್ರಿಕೂಟದ ಮಹತ್ವದ ಸಭೆ ನಡೆದಿದ್ದು, ಸತತ 3ನೇ ಬಾರಿಗೆ ಎನ್‌ಡಿಎ ನಾಯಕನಾಗಿ ನರೇಂದ್ರ ಮೋದಿ ಅವರನ್ನು ನೇಮಕ ಮಾಡಲಾಗಿದೆ.

ಹಳೇ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇಂದು ನೂತನ ಸಂಸದರು, ಎನ್‌ಡಿಎ ಮಿತ್ರಪಕ್ಷಗಳ ನಾಯಕರ ಸಭೆ ನಡೆಯಿತು.

ಈ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಮೂರನೇ ಬಾರಿಗೆ ಎನ್‌ಡಿಎ ನಾಯಕನಾಗಿ ನರೇಂದ್ರ ಮೋದಿಯವರ ಹೆಸರು ಹೇಳಿದರು. ರಾಜನಾಥ್ ಸಿಂಗ್ ಅವರಿಂದ ಎನ್‌ಡಿಎ ನಾಯಕನಾಗಿ ಮೋದಿ ಹೆಸರನ್ನು ಪ್ರಸ್ತಾಪ ಮಾಡಲಾಯಿತು.

ಬಿಜೆಪಿ ನಾಯಕರು ಎನ್‌ಡಿಎ ನಾಯಕನಾಗಿ ಮೋದಿ ಅವರ ಹೆಸರನ್ನು ಅನುಮೋದಿಸಿದ ಬಳಿಕ ಎನ್‌ಡಿಎ ಮಿತ್ರಪಕ್ಷಗಳಾದ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಜೆಡಿಯು ನಾಯಕ ನಿತೀಶ್ ಕುಮಾರ್, ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಅನುಮೋದನೆ ನೀಡಿದರು.

ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರು ಮೋದಿ ಅವರು ದೇಶವನ್ನು ಪ್ರೇರೇಪಿಸಿದ್ದಾರೆ. ಇಡೀ ದೇಶ ಮೋದಿ ಅವರ ಜೊತೆಗಿದೆ. ನಿಮ್ಮ ಮಾರ್ಗದರ್ಶನದಲ್ಲಿ 91% ಗೆಲುವು ಆಂಧ್ರದಲ್ಲಿ ಸಾಧಿಸಿದ್ದೇವೆ. ಜನಸೇನಾ ಕಡೆಯಿಂದ ಅವರ ಹೆಸರಿಗೆ ನಾವು ಅನುಮೋದಿಸುತ್ತೇವೆ ಎಂದು ಹೇಳಿದರು.

ಎಲ್ಲಾ ಪಕ್ಷದ ನಾಯಕರು ಮೋದಿ ಅವರ ಹೆಸರಿಗೆ ಅನುಮೋದನೆ ನೀಡಿದ ನಂತರ ಎಲ್ಲಾ ಸಂಸದರ ಮುಂದೆ ನರೇಂದ್ರ ಮೋದಿ ಅವರ ಹೆಸರನ್ನು ಪ್ರಸ್ತಾಪ ಮಾಡಲಾಯಿತು. ಆಗ ಎಲ್ಲಾ‌ ಸಂಸದರು ಏಕಪಕ್ಷೀಯವಾಗಿ ಅನುಮೋದನೆ ನೀಡಿದರು.

ಎನ್‌ಡಿಎ ಮೈತ್ರಿಕೂಟದ ನಾಯಕ ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಮೋದಿ ಅವರನ್ನೇ ಆಯ್ಕೆ ಮಾಡಲಾಗಿದೆ.

Scroll to Top