ಉಡುಪಿ : ಸಂತೆಕಟ್ಟೆ ಬಳಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಗೆ ಟ್ಯಾಂಕರ್ ಲಾರಿಯೊಂದು ರಸ್ತೆ ಬದಿ ಇರುವ ಹೊಂಡಕ್ಕೆ ಉರುಳಿ ಬಿದ್ದ ಘಟನೆ ನಡೆದಿದೆ.
ಸಂತೆಕಟ್ಟೆ ನಿರ್ಮಾಣ ಹಂತದ ಕೆಳಸೇತುವೆ ಪ್ರದೇಶವನ್ನು ಹಾದುಹೋದ ನಂತರ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಹೆದ್ದಾರಿ ಕಾಮಗಾರಿಗಾಗಿ ಇಲ್ಲಿ ಬೃಹತ್ ಹೊಂಡ ನಿರ್ಮಿಸಲಾಗಿದ್ದು, ಇದರೊಳಗೆ ಟ್ಯಾಂಕರ್ ಬಿದ್ದಿದೆ. ಟ್ಯಾಂಕರ್ ರಾತ್ರಿ ಬಿದ್ದಿದ್ದರೂ ಸ್ಥಳೀಯ ಜನರಿಗೆ ಗೊತ್ತಾಗಿದ್ದು ಶನಿವಾರ ಬೆಳಗ್ಗೆ. ಟ್ಯಾಂಕರ್ ಚಾಲಕ ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದ ಮುಚ್ಚಿದ ಸರ್ವಿಸ್ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕೆಸರು ತುಂಬಿದ ರಸ್ತೆಯಿಂದಾಗಿ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಚಾಲಕ ಪಾರಾಗಿದ್ದಾರೆ. ಇದೇ ರಸ್ತೆಯಲ್ಲಿ ದಿನಾ ನೂರಾರು ಪ್ರಯಾಣಿಕರನ್ನು ಹೊತ್ತು ಸರ್ವಿಸ್ ಬಸ್ ಗಳು ಸಾಗುತ್ತಿರುತ್ತವೆ. ರಸ್ತೆಯ ಅವ್ಯವಸ್ಥೆಯಿಂದಾಗಿ ಇದೀಗ ಜನರ ಪ್ರಾಣಕ್ಕೆ ಸಂಕಷ್ಟ ಎದುರಾಗಿದೆ.