ಶಿರ್ವ : ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದು, ಸೇವೆ ಸಲ್ಲಿಸುತ್ತಿದ್ದ ಬೆಳ್ಳೆ ಕುಂತಳನಗರ ನಿವಾಸಿ ಯೋಧ ಮೊಹಮ್ಮದ್ ಸಲೀಂ (35) ಅನಾರೋಗ್ಯದಿಂದ ಜೂ. 7ರಂದು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ತಂದೆ, ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಭಾರತೀಯ ಭೂ ಸೇನೆಯ 196 ಆರ್ಟಿ ರೆಜಿಮೆಂಟ್‌ನ ಜಮ್ಮು-ಕಾಶ್ಮೀರ, ದೆಹಲಿ ಮತ್ತು ಸಿಕಂದರಾಬಾದ್‌ನಲ್ಲಿ 14ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಹರ್ಯಾಣದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಕಿಡ್ನಿ ವೈಫಲ್ಯದಿಂದ ಅನಾರೋಗ್ಯಕ್ಕೆ ತುತ್ತಾದ ಅವರನ್ನು ಬೆಂಗಳೂರಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಾಯಿ ಹಾಗೂ ಪತ್ನಿ ಕಿಡ್ನಿ ದಾನ ಮಾಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದು, ಕಾಪು ತಹಶೀಲ್ದಾರ್ ಡಾ.ಪ್ರತಿಭಾ ಆರ್ ಅವರು ಶನಿವಾರ ಮೃತರ ನಿವಾಸಕ್ಕೆ ತೆರಳಿ ಯೋಧನ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.
ಬೆಳ್ಳೆ ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಕುಮಾರ್, ಬೆಳ್ಳೆ ಗ್ರಾ.ಪಂ. ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ, ಮೃತರ ಪತ್ನಿ, ತಂದೆ, ತಾಯಿ, ಸಹೋದರ ಯೋಧ ಮಹಮ್ಮದ್ ಬುಹ್ರಾಮ್ ಮೊದಲಾದವರು ಉಪಸ್ಥಿತರಿದ್ದರು.
ಮಣಿಪುರ ದೆಂದೂರುಕಟ್ಟೆ ನಿವಾಸಿ ಮೊಹಮ್ಮದ್ ಹಂಝ ಕೋಯಾ ಅವರ 7 ಗಂಡು ಮಕ್ಕಳಲ್ಲಿ 3 ಮಂದಿ ಯೋಧರಾಗಿದ್ದಾರೆ. ಮಹಮ್ಮದ್ ಸಲೀಂ ಯೋಧನಾಗಿ ಹರ್ಯಾಣದಲ್ಲಿ ಸೇವೆ ಸಲ್ಲಿಸಿ ನಿಧನ ಹೊಂದಿದರೆ, ಮೊಹಮ್ಮದ್ ಬುಹ್ರಾನ್ ಸೇನೆಯ ಪಂಜಾಬ್‌ತುಕಡಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತೋರ್ವ ಪುತ್ರ ಮೊಹಮ್ಮದ್ ಅಫಾನ್ ಸೇನೆಗೆ ಆಯ್ಕೆಯಾಗಿದ್ದು, ದೆಹಲಿಯಲ್ಲಿ ಮಿಲಿಟರಿ ತರಬೇತಿಯಲ್ಲಿದ್ದಾರೆ.
ಮಣಿಪುರ ಖಬರಸ್ತಾನದಲ್ಲಿ ಶನಿವಾರ ಸಕಲ ಸರಕಾರಿ/ ಮಿಲಿಟರಿ ಗೌರವಗಳೊಂದಿಗೆ ಯೋಧ ಮಹಮ್ಮದ್ ಸಲೀಂ ಅವರ ಅಂತಿಮ ಸಂಸ್ಕಾರ ನಡೆಯಿತು.