ಬೈಕ್ ನಲ್ಲಿ ಸಂಚರಿಸಿ ಖರ್ದುಂಗ್ಲಾದಲ್ಲಿ 17,982 ಅಡಿ ಎತ್ತರದಲ್ಲಿ ಕನ್ನಡ ಬಾವುಟ ಹಾರಿಸಿದ ಶಿರ್ವದ ಅಪ್ಪ-ಮಗ

ಶಿರ್ವ: ದುರ್ಗಮ ಹಾದಿಯಲ್ಲಿ ಬೈಕ್‌ನಲ್ಲಿ ಸಂಚರಿಸಿ ವಿಶ್ವದ 2ನೇ ಅತೀ ಎತ್ತರ ಪ್ರದೇಶವಾದ ಜಮ್ಮು ಕಾಶ್ಮೀರದ ಖರ್ದುಂಗ್ಲಾದಲ್ಲಿ ಶಿರ್ವದ ರಾಜೇಂದ್ರ ಶೆಣೈ ಮತ್ತು ಮಗ ಪ್ರಜ್ವಲ್‌ ಶೆಣೈ ಕನ್ನಡ ಬಾವುಟ ಹಾರಿಸಿ ಕನ್ನಡಾಭಿಮಾನ ಮೆರೆದಿದ್ದಾರೆ.

ರಾಜೇಂದ್ರ ಶೆಣೈ ಮತ್ತು ಪ್ರಜ್ವಲ್‌ ಶೆಣೈ ಬೈಕ್‌ನೊಂದಿಗೆ ಜೂನ್‌ ಮೊದಲ ವಾರದಲ್ಲಿ ಉಡುಪಿಯಿಂದ ರೈಲಿನಲ್ಲಿ ಹೊರಟು ದೆಹಲಿ ತಲುಪಿದ್ದಾರೆ. ಅಲ್ಲಿಂದ ತಮ್ಮ ಹೀರೋ ಹೊಂಡಾ ಸ್ಪೆಂಡ್ಲ‌ರ್‌ ಬೈಕ್‌ ಮೂಲಕ ಹರ್ಯಾಣ, ಪಂಜಾಬ್‌, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ರಾಜ್ಯಗಳನ್ನು ಸುತ್ತಿ ಲೇಹ್‌ ಲಡಾಕ್‌, ಕಾರ್ಗಿಲ್‌ ಮನಾಲಿ ಮೂಲಕ ಸಮುದ್ರ ಮಟ್ಟದಿಂದ ಸರಿ ಸುಮಾರು 17,982 ಅಡಿ ಎತ್ತರವಿರುವ ವಿಶ್ವದ 2ನೇ ಅತೀ ಎತ್ತರದ ಪ್ರದೇಶ ಖರ್ದುಂಗ್ಲಾ ತಲುಪಿದ್ದಾರೆ. 10 ದಿನಗಳ ಅವಧಿಯಲ್ಲಿ ಸುಮಾರು 2,100 ಕಿ.ಮೀ. ಪ್ರಯಾಣ ಬೆಳೆಸಿದ್ದಾರೆ. ಕಾರ್ಗಿಲ್‌ ಯುದ್ಧದಲ್ಲಿ ವೀರ ಮರಣ ಹೊಂದಿದ ಕ್ಯಾ| ವಿಕ್ರಮ್‌ ಬಾತ್ರಾ ಮತ್ತು ಇತರ ಸೈನಿಕರ ಸಮಾಧಿ ಸ್ಥಳಕ್ಕೆ ತೆರಳಿ ಶ್ರದ್ಧಾಂಜಲಿ ಸಮರ್ಪಿಸಿದ್ದಾರೆ.
ರಾಜಸ್ತಾನ ಹಾಗೂ ಪಂಜಾಬ್‌ ಮೂಲಕ ಸಾಗುವಾಗ 45 ಡಿಗ್ರಿ ಸೆ. ಬಿಸಿಗಾಳಿ ಇದ್ದು, ಜಮ್ಮು ಶ್ರೀನಗರ ಮಾರ್ಗವಾಗಿ ಚಲಿಸುವಾಗ ಹಿಮಚ್ಛಾದಿತ ಬೆಟ್ಟ, ಗುಡ್ಡ ತೊರೆಯಲ್ಲಿ ಮೈನಸ್‌ 5 ಡಿಗ್ರಿ ಉಷ್ಣಾಂಶ ಇತ್ತು. ಗುಡ್ಡ ಪ್ರದೇಶದಲ್ಲಿ ರಸ್ತೆ ಅಗಲ ಕಿರಿದಾಗಿದ್ದು, ಎರಡೂ ಬದಿಯಿಂದ ಕಲ್ಲುಗಳು ಉದುರುತ್ತಿದ್ದವು. ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿದು ರಸ್ತೆ ಸಂಚಾರ ಸ್ಥಗಿತಗೊಳ್ಳುವ ಸಂಭವವಿತ್ತು. ರಸ್ತೆಯ ಎರಡೂ ಬದಿ ಆಳವಾದ ಪ್ರಪಾತವಿದ್ದು ಸ್ವಲ್ಪ ಯಾಮಾರಿದರೂ ಉರುಳಿ ಪ್ರಪಾತಕ್ಕೆ ಬೀಳುವ ಪರಿಸ್ಥಿತಿ ಇದ್ದು, ನೋಡುವಾಗ ಭಯಾನಕವಾಗಿತ್ತು. ನಿರ್ಜನ ಪ್ರದೇಶ, ಜನ, ವಾಹನ ಸಂಚಾರ ಕಡಿಮೆ ಇದ್ದು, ಕಲ್ಲು ಹೊಂಡ ನೀರುಮಯವಾಗಿದ್ದ ರಸ್ತೆಯಲ್ಲಿ ಕ್ರಮಿಸಬೇಕಾಗಿತ್ತು ಎಂದು ಪ್ರಜ್ವಲ್‌ ಶೆಣೈ ತನ್ನ ಪ್ರವಾಸ ಅನುಭವ ಕಥನವನ್ನು ಬಿಚ್ಚಿಟ್ಟಿದ್ದಾರೆ.

ಸಮುದ್ರ ಮಟ್ಟದಿಂದ ಸುಮಾರು 19024 ಅಡಿ ಎತ್ತರದ ವಿಶ್ವದ ಅತೀ ಎತ್ತರದ ಸ್ಥಳ ಉಮ್ಲಿಂಗ್ಲಾ ತಲುಪಲು ಆಸೆಯಿತ್ತು. ಪ್ರತಿಕೂಲ ಹವಾಮಾನ ಮತ್ತು ಆಮ್ಲಜನಕದ ಕೊರತೆ ಇದ್ದುದರಿಂದ ಪ್ರವಾಸವನ್ನು ಅರ್ಧಕ್ಕೆ ಮುಗಿಸಿ ಉಡುಪಿಗೆ ಹಿಂತಿರುಗಬೇಕಾಯಿತು ಎಂದು ಪ್ರಜ್ವಲ್‌ ಶೆಣೈ ಹೇಳಿದರು.

You cannot copy content from Baravanige News

Scroll to Top