ಕಾಪು : ವಾಹನ ಚಾಲಕರು, ಸಂಚಾರಿಗಳ ಪ್ರಾಣಕ್ಕೆ ಸಂಚಕಾರ

ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ರಸ್ತೆ ಮಧ್ಯೆ ಅಲ್ಲಲ್ಲಿ ನೀರು ನಿಂತು ಕೊಂಡಿರುವ ಪರಿಣಾಮ ಈ ವರ್ಷವೂ ಮಳೆಗಾಲದಲ್ಲಿ ಹೆದ್ದಾರಿ ಮೇಲಿನ ಸಂಚಾರ ವಾಹನ ಸವಾರರ ಪಾಲಿಗೆ ಸಂಚಕಾರವನ್ನುಂಟು ಮಾಡುತ್ತಿದೆ.

ರಸ್ತೆಯ ಇಕ್ಕೆಲಗಳಲ್ಲಿ ಕೆಲವೆಡೆ ಮಳೆ ನೀರನ್ನು ಅಂದಾಜಿಸಲಾಗದ ವಾಹನ ಸವಾರರು ಹತೋಟಿ ತಪ್ಪಿ ಡಿವೈಡರ್‌ ಮೇಲೇರುತ್ತಿದ್ದರೆ. ಕೆಲವೆಡೆಗಳಲ್ಲಿ ವಾಹನಗಳು ಓಡುವ ರಭಸಕ್ಕೆ ನೀರು ಎರಚಲ್ಪಟ್ಟು ವಾಹನ ಸವಾರರು ಕ್ಷಣಕಾಲ ತಬ್ಬಿಬ್ಟಾಗಿ ಹೆದ್ದಾರಿಯಲ್ಲೇ ನಿಂತು ಬಿಡಬೇಕಾದ ಅನಿವಾರ್ಯತೆಗೆ ಸಿಲುಕುವಂತಾಗಿದೆ.

ಎಲ್ಲೆಲ್ಲಿ ಸಮಸ್ಯೆ?

ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಉಚ್ಚಿಲ, ಮೂಳೂರು, ಕೊಪ್ಪಲಂಗಡಿ, ಕಾಪು, ಪಾಂಗಾಳದ ಕೆಲವು ಕಡೆಗಳಲ್ಲಿ ಸಮಸ್ಯೆಯಾಗುತ್ತಿದೆ. ಅದರಲ್ಲೂ ಉಚ್ಚಿಲ – ಮೂಳೂರು ಡೈವರ್ಷನ್‌, ಹೊಟೇಲ್‌ ಕೆ -1 ಬಳಿಯ ಡೈವರ್ಷನ್‌ ಮತ್ತು ಕೋತಲಕಟ್ಟೆ – ಪಾಂಗಾಳ ಡೈವರ್ಷನ್‌ ಈ ಮೂರೂ ಜಂಕ್ಷನ್‌ಗಳಲ್ಲಿಯೂ ನಿರಂತರ ಅಪಘಾತಗಳು ಸಂಭವಿಸುತ್ತಿವೆ.

ಉಚ್ಚಿಲ ಪೇಟೆ, ಮೂಳೂರು ಕುಂಜೂರು ಆಟೋ ಮೊಬೈಲ್ಸ್‌ ಗ್ಯಾರೇಜ್‌ ಬಳಿ, ಮೂಳೂರು ಸಿಎಸ್‌ಐ ಶಾಲೆ ಬಳಿ, ಮೂಳೂರು ಅಲ್‌ಇಹ್ಸಾನ್‌ ಶಾಲೆ ಬಳಿಯೂ ಇದೇ ರೀತಿಯ ಸಮಸ್ಯೆ ಹಲವು ವರ್ಷಗಳಿಂದಲೂ ಇದೆ. ಪ್ರತೀ ವರ್ಷ ಇಲ್ಲಿನ ಸಮಸ್ಯೆ ಬಗ್ಗೆ ಸ್ಥಳೀಯರು, ಮಾಧ್ಯಮಗಳು ಸಂಬಂಧಪಟ್ಟವರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೂ, ಸಮಸ್ಯೆಗೆ ಇಲ್ಲಿವರೆಗೂ ಸ್ಪಂದನೆ ಸಿಕ್ಕಿಲ್ಲ.

ಚತುಷ್ಪಥ ಯೋಜನೆಯ ಕಾಮಗಾರಿಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳು, ಸಂಸದರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾಲೂಕು ಮಟ್ಟದ ಮುಂಗಾರು ಮುಂಜಾಗ್ರತಾ ಸಭೆಯಲ್ಲೂ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಇಷ್ಟಾದರೂ ಮಳೆಗಾಲದಲ್ಲಿ ಉಂಟಾಗುತ್ತಿರುವ
ಸಮಸ್ಯೆಗಳನ್ನು ಬಗೆಹರಿಸಲು ಮೀನಾ ಮೇಷ ಎಣಿಸುತ್ತಿರುವ ಅಧಿಕಾರಿಗಳ ವಿರುದ್ಧ ಹೆದ್ದಾರಿ ಇಲಾಖೆಯ ಸಚಿವರಿಗೆ ಪತ್ರ ಬರೆದು, ಜನರ ಸಮಸ್ಯೆಗಳನ್ನು ಅವರ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು. ಕರಾವಳಿಯ ಸಂಸದರ ನೇತೃತ್ವದಲ್ಲಿ ಶಾಸಕರ ಜತೆಗೂಡಿ ದಿಲ್ಲಿಗೆ ನಿಯೋಗ ತೆರಳಿ ಇಲ್ಲಿನ ಅವೈಜ್ಞಾನಿಕ ಕಾಮಗಾರಿ ಬಗ್ಗೆ ಸರಕಾರಕ್ಕೆ ವಿವರಿಸುವ ಮತ್ತು ಗಮನಕ್ಕೆ ತರುವ ಪ್ರಯತ್ನ ಮಾಡುತ್ತೇವೆ.
-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

ಹೆದ್ದಾರಿ ಇಲಾಖೆಗೆ ಹಲವು ಬಾರಿ ಪತ್ರ ಮುಖೇನ ಮನವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಅಪಘಾತಕ್ಕೆ ಕಾರಣವಾಗುತ್ತಿದೆ. ದಾರಿ ದೀಪ ಕೆಟ್ಟು ಅಪಘಾತ, ಅಕ್ರಮ ಚಟುವಟಿಕೆಗಳಿಗೆ ಸಹಕಾರ ಕೊಟ್ಟಂತಾಗುತ್ತಿದೆ.
ಸರ್ವೀಸ್‌ ರಸ್ತೆಯಿಲ್ಲದೇ ರಾಂಗ್‌ ಸೈಡ್‌ಗಳಲ್ಲಿ ವಾಹನಗಳು ಓಡಾಡಿ ಸಮಸ್ಯೆಗಳಾಗುತ್ತಿವೆ. ಇವೆಲ್ಲದಕ್ಕೂ ಹೆದ್ದಾರಿ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯೇ ಮುಖ್ಯ ಕಾರಣವಾಗಿದೆ. ಕಾಪು ಪರಿಸರದ ಸಮಸ್ಯೆಗಳ ಬಗ್ಗೆ ಹೆದ್ದಾರಿ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ಈ ಬಗ್ಗೆ ಪೊಲೀಸ್‌ ವರಿಷ್ಠಾಧಿಕಾರಿಗಳ ಮೂಲಕವಾಗಿ ಮತ್ತೆ ಹೆದ್ದಾರಿ ಇಲಾಖೆಯ ಗಮನ ಸೆಳೆಯಲು ಪ್ರಯತ್ನಿಸಲಾಗುವುದು.
-ಅಬ್ದುಲ್‌ ಖಾದರ್‌ ಎಸ್ಸೈ, ಕಾಪು

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top