ಉಡುಪಿ: ಪ್ರವಾಸೋದ್ಯಮ ಚಟುವಟಿಕೆ ಸ್ಥಗಿತಗೊಳಿಸಲು ಇಲಾಖೆ ಸೂಚನೆ

ಉಡುಪಿ, ಜು.03: ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ವಿವಿಧ ಪ್ರವಾಸಿ ಸ್ಥಳಗಳಲ್ಲಿ ಆಸ್ತಿ-ಪಾಸ್ತಿ ಹಾನಿ ಹಾಗೂ ಜೀವಹಾನಿ ಉಂಟಾಗುವ ಸಂಭವವಿರುವುದರಿಂದ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿರುವ ಸ್ಥಳಗಳಾದ ಕಡಲ ತೀರದಲ್ಲಿ, ನದಿಗಳಲ್ಲಿ, ಹಿನ್ನೀರಿನಲ್ಲಿ, ಬೋಟಿಂಗ್ ಹಾಗೂ ಇತರೆ ಪ್ರವಾಸೋದ್ಯಮ ಜಲಸಾಹಸ ಕ್ರೀಡೆ ಹಾಗೂ ಚಟುವಟಿಕೆಗಳನ್ನು ನಡೆಸದಂತೆ ಈ ಹಿಂದೆ ಸೂಚಿಸಲಾಗಿತ್ತು.

ಆದರೂ ಸಹ ಕೆಲವು ಕಡೆಗಳಲ್ಲಿ ಇಲಾಖೆಯಿಂದ ಅನುಮೋದಿಸಿರುವಂತೆ ಖಾಸಗಿ ಸಹಭಾಗಿತ್ವದವರು ತಮ್ಮ ಜಲಸಾಹಸ ಚಟುವಟಿಕೆಗಳನ್ನು ನಡೆಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿರುತ್ತದೆ.

ಆದ್ದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸಂಬಂಧಿಸಿದಂತೆ ಜಲಸಾಹಸ ಚಟುವಟಿಕೆಗಳಾದ ಬೋಟಿಂಗ್, ಕಯಾಕಿಂಗ್, ಸರ್ಫಿಂಗ್ ಹಾಗೂ ಐಲ್ಯಾಂಡ್‌ಗಳಲ್ಲಿ ಒಂದು ದಿನದ ಪ್ರವಾಸೋದ್ಯಮ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವವರೆಗೆ ಕಡ್ಡಾಯವಾಗಿ ಸ್ಥಗಿತಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy content from Baravanige News

Scroll to Top