ಪಾರ್ಕ್ ಗುತ್ತಿಗೆ ಪಡೆದವನಿಂದಲೇ ಮರಗಳ ಮಾರಣಹೋಮ ; ನಿರ್ವಹಣೆ ಹೆಸರಲ್ಲಿ ಪಾರ್ಕ್‌ನಲ್ಲಿದ್ದ ಮರಗಳಿಗೆ ಕೊಡಲಿಯೇಟು

ಉಡುಪಿ : ನಗರಸಭೆಯ ಅನುಮತಿ ಇಲ್ಲದೆ ನಗರದ ಭುಜಂಗ ಪಾರ್ಕ್‌ ನಲ್ಲಿದ್ದ ನಾಲ್ಕೈದು ಮರಗಳನ್ನು ಕಡಿದು ಹಾಕಿದ ಗುತ್ತಿಗೆದಾರನನ್ನು ತರಾಟೆಗೆ ತೆಗೆದುಕೊಂಡ ಪೌರಾಯುಕ್ತರು, ಆತನಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ಪಾರ್ಕ್ ನಲ್ಲಿ ಬೆಳೆದು ನಿಂತ ಮರಗಳನ್ನು ಅಪಾಯಕಾರಿ ಎಂಬ ನೆಲೆಯಲ್ಲಿ ಪಾರ್ಕ್ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರ ಸುರೇಶ್ ಎಂಬವರ ಸೂಚನೆಯಂತೆ ಕಾರ್ಮಿಕರು ಕಡಿಯುತ್ತಿದ್ದರು. ಇದಕ್ಕೆ ಪಾರ್ಕ್ ನಲ್ಲಿ ವಿಹರಿಸುವ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಕಾರ್ಮಿಕರು ನಾಲ್ಕೈದು ಮರಗಳನ್ನು ಕಡಿದು ಧರೆಗೆ ಉರುಳಿಸಿದರು. ಉಳಿದ ಮರಗಳನ್ನು ಕಡಿಯಲು ಸಿದ್ಧತೆ ಮಾಡುತ್ತಿದ್ದಾಗ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ರಾಯಪ್ಪ ಮರ ಕಡಿಯುವುದನ್ನು ತಡೆದರು.

ಈ ವೇಳೆ ಗುತ್ತಿಗೆದಾರರನನ್ನು ಸ್ಥಳಕ್ಕೆ ಕರೆಸಿ, ಯಾವುದೇ ಅನುಮತಿ ಇಲ್ಲದೇ ಮರ ಕಡಿದಿರುವುದಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡರು. ಈ ತಪ್ಪಿಗೆ 25 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಒಂದು ಮರದ ಬದಲು 10 ಗಿಡಗಳನ್ನು ನೆಡುವಂತೆ ಗುತ್ತಿಗೆದಾರನಿಗೆ ಪೌರಾಯುಕ್ತರು ಸೂಚಿಸಿದರು. ಈ ಸಂದರ್ಭದಲ್ಲಿ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಹಾಜರಿದ್ದರು. ಮಾಹಿತಿ ತಿಳಿದು ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿಗಳು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top