ಕಾಪು : ಬ್ಯಾಂಕ್ ಆಫ್ ಬರೋಡಾದಿಂದ ಸಾಲ ಪಡೆದು ಖರೀದಿಸಿದ ಕಾರನ್ನು ಶಾಖಾ ಪ್ರಬಂಧಕರ ಸಹಿ, ಮೊಹರು ಬಳಸಿ ಮತ್ತು ನಕಲಿ ಲೆಟರ್ ಹೆಡ್ ಬಳಸಿ ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ಘಟನೆ ಕಾಪುವಿನಲ್ಲಿ ಬೆಳಕಿಗೆ ಬಂದಿದೆ.
ಮಲ್ಲಾರು ನಿವಾಸಿ ರಿಯಾನತ್ ಬಾನು ಮತ್ತು ರಹೀಮಾ ಬಾನು ಬ್ಯಾಂಕ್ ಆಫ್ ಬರೋಡಾ ಕಾಪು ಶಾಖೆಯ ನಕಲಿ ಲೆಟರ್ ಹೆಡ್ ಮತ್ತು ಮೊಹರು ಬಳಸಿ, ಸಹಿ ಹಾಕಿ ಕಾರನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ ಆರೋಪಿಗಳು ಎಂದು ಸಾಲ ಪಡೆದ ಸೊಸೆ ಮತ್ತು ಜಾಮೀನು ಹಾಕಿದ ಅತ್ತೆಯ ವಿರುದ್ಧ ಕಾಪು ಶಾಖಾ ಪ್ರಬಂಧಕ ಶಿವಪ್ರಸಾದ್ ಬಿ. ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ರಿಯಾನತ್ 2023ರ ಜ. 18ರಂದು ಕಿಯಾ ಕಂಪೆನಿಯ ಕಾರು ಖರೀದಿ ಸಲೆಂದು ಬ್ಯಾಂಕ್ ಆಫ್ ಬರೋಡಾ ಕಾಪು ಶಾಖೆಯಲ್ಲಿ 17,50,000 ರೂ. ಸಾಲ ಪಡೆದಿದ್ದರು.
ಆರೋಪಿತರು ಪಡೆದ ಸಾಲದ ಕಂತುಗಳನ್ನು ಸರಿಯಾಗಿ ಪಾವತಿಸದೇ ಇದ್ದಾಗ ಬ್ಯಾಂಕಿನ ಸ್ವಾಧೀನಾಧಿಕಾರಿ ವಾಹನವನ್ನು ಜಪ್ತಿ ಮಾಡುವ ಸಂದರ್ಭದಲ್ಲಿ ಕಾರನ್ನು ಲೋಕೇಶ್ ಹೆಸರಿಗೆ ಬದಲಾಯಿಸಿರುವುದು ಗಮನಕ್ಕೆ ಬಂದಿತ್ತು. ಆರೋಪಿಗಳು ಬ್ಯಾಂಕ್ ಅಧಿಕಾರಿಯ ನಕಲಿ ಸಹಿ ಬಳಸಿ ಸಿದ್ಧಪಡಿಸಿದ ದಾಖಲೆ ಮೂಲಕ ಕಾರನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.