ಮಣಿಪಾಲ : ಹಿರಿಯ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ್ ರಾವ್ ಅವರು ಶುಕ್ರವಾರ ಹೃದಯಘಾತದಿಂದ ನಿಧನ ಹೊಂದಿದರು.
ಇರಾ (ಕುಂಡಾವು), ಕೂಡ್ಲು, ಮೂಲ್ಕಿ, ಕರ್ನಾಟಕ ಮೇಳ ಮತ್ತು ಧರ್ಮಸ್ಥಳ ಮೇಳದಲ್ಲಿ ಯಕ್ಷ ವ್ಯವಸಾಯ ಮಾಡಿದವರು ಕುಂಬಳೆ ಶ್ರೀಧರ್ ರಾವ್ ಅವರು. ತೆಂಕುತಿಟ್ಟಿನ ಅಪ್ರತಿಮ ಸ್ತ್ರೀವೇಷಧಾರಿಯಾಗಿ ಕಲಾಸೇವೆ ಮಾಡಿರುವ ಅವರು ದಮಯಂತಿ, ದಾಕ್ಷಾಯಿಣಿ, ಅಮ್ಮು ಬಲ್ಲಾಳ್ತಿ, ಲಕ್ಷ್ಮಿ, ಸುಭದ್ರೆ, ಸತ್ಯಭಾಮೆ ಅಲ್ಲದೆ ಪ್ರಮೀಳೆ, ಶಶಿಪ್ರಭೆ ಮುಂತಾದ ಪಾತ್ರಗಳಿಂದ ದೊಡ್ಡ ಹೆಸರು ಮಾಡಿದವರು.
ಮಾಲಿಂಗ ಮುಕಾರಿ ಮತ್ತು ಕಾವೇರಿ ದಂಪತಿಗಳಿಗೆ ಪುತ್ರನಾಗಿ ಶ್ರೀಧರ ರಾಯರು 1948ರ ಜುಲೈ 23ರಂದು ಕಾಸರಗೋಡು ಜಿಲ್ಲೆಯ ಕುಂಬಳೆ ಸಮೀಪದ ನಾಯ್ಕಾಪುವಿನಲ್ಲಿ ಜನಿಸಿದರು.
1962ರಲ್ಲಿ ಕಲ್ಲಾಡಿ ಕೊರಗ ಶೆಟ್ಟರ ಯಜಮಾನಿಕೆಯ ಕುಂಡಾವು ಮೇಳಕ್ಕೆ ಶ್ರೀಧರ ರಾಯರು ಬಾಲಕಲಾವಿದನಾಗಿ ಸೇರ್ಪಡೆಗೊಂಡರು. ಬಳಿಕ ಕೂಡ್ಲು, ಮೂಲ್ಕಿ, ಕರ್ನಾಟಕ ಮೇಳ ಮತ್ತು ಧರ್ಮಸ್ಥಳ ಮೇಳಗಳಲ್ಲಿ ಕುಂಬಳೆ ಶ್ರೀಧರ ರಾಯರು ಕಲಾಸೇವೆ ಮಾಡಿದವರು. ಧರ್ಮಸ್ಥಳ ಮೇಳದಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ತಿರುಗಾಟ ಮಾಡಿದ್ದರು.