ಬೆಂಗಳೂರು : ಟಿಕೆಟ್ ಕೊಡುವ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಕಂಡಕ್ಟರ್ಗಳ ಮಧ್ಯೆ ಚಿಲ್ಲರೆಗಾಗಿ ಯಾವಾಗಲೂ ಜಗಳ ನಡೆಯುತ್ತಲೇ ಇರುತ್ತದೆ. ಈ ರೀತಿಯ ಕಿರಿಕಿರಿಗಳಿಗೆ ಮುಕ್ತಿಹಾಡಲು ಕೆಎಸ್ಆರ್ಟಿಸಿ ಮುಂದಾಗಿದೆ.
ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮೂಲಕ ಹಣ ಪಾವತಿಸಲು ಪ್ರಯಾಣಿಕರಿಗೆ ಅವಕಾಶ ಕಲ್ಪಿಸುವ ಹೊಸ ವ್ಯವಸ್ಥೆ ಜಾರಿಗೆ ತರಲು ಕೆಎಸ್ಆರ್ಟಿಸಿ ಮುಂದಾಗಿದೆ. ಶೀಘ್ರದಲ್ಲೇ ಈ ವ್ಯವಸ್ಥೆ ಅನುಷ್ಠಾನಗೊಳ್ಳುವ ನಿರೀಕ್ಷೆ ಇದೆ.
ಕಾರ್ಡ್ಗಳನ್ನು ಬಳಸಿಯೂ ಪಾವತಿ ಮಾಡಬಹುದು!
ಖಾಸಗಿ ಕಂಪೆನಿಯಿಂದ ಒಂದು ಮಷಿನ್ಗೆ ಪ್ರತಿ ತಿಂಗಳು 645 ರೂಪಾಯಿ ಬಾಡಿಗೆ ಆಧಾರದಲ್ಲಿ 10245 ಸಾವಿರ ಇಟಿಎಂ ಟಿಕೆಟ್ ಮಷಿನ್ಗಳ ಖರೀದಿಗೆ ಕೆಎಸ್ಆರ್ಟಿಸಿ ಮುಂದಾಗಿದೆ. ಇದರಿಂದ ಇನ್ಮುಂದೆ ಕೆಎಸ್ಆರ್ಟಿಸಿ ಬಸ್ನಲ್ಲಿ ಗೂಗಲ್ ಪೇ, ಫೋನ್ ಪೇ. ಪೇಟಿಎಂ ಮೂಲಕ ಹಣ ಪಾವತಿ ಮಾಡಿ ಟಿಕೆಟ್ ಪಡೆದು ಪ್ರಯಾಣಿಸಬಹುದಾಗಿದೆ. ಈ ನೂತನ ಮಷಿನ್ಗಳಲ್ಲಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ಗಳನ್ನು ಬಳಸಿಯೂ ಹಣ ಪಾವತಿ ಮಾಡಬಹುದು.
6500 ಬಸ್ಗಳಿಗೆ ಹೊಸ ಮಷಿನ್
ಸದ್ಯ ಈಗ ಇರುವ ಮಷಿನ್ಗಳು ರೋಡ್ ಮಧ್ಯೆ ಕೈಕೊಟ್ಟು ಪ್ರಯಾಣಿಕರು ಮತ್ತು ಕಂಡಕ್ಟರ್ ಜೊತೆಗೆ ಜಗಳವಾಗುತ್ತಿದೆ. ಹೊಸ ಮಷಿನ್ನಿಂದ ಇದು ತಪ್ಪಲಿದೆ. ಇತ್ತೀಚೆಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣ ಮಾಡುವ ಹೆಚ್ಚಿನವರ ಬಳಿ ಕ್ಯಾಶ್ ಇರುವುದಿಲ್ಲ. ಹಾಗಾಗಿ ಪ್ರಯಾಣಿಕರ ಅನಕೂಲಕ್ಕಾಗಿ ಇಟಿಎಂ ಸಹಕಾರಿ ಆಗಲಿದೆ. ನಿಗಮದ 6500 ಬಸ್ಸುಗಳಲ್ಲೂ ಹೊಸ ವ್ಯವಸ್ಥೆ ಪರಿಚಯ ಮಾಡಲಾಗುತ್ತದೆ. ಶಕ್ತಿ ಯೋಜನೆಯ ಪಿಂಕ್ ಟಿಕೆಟ್ಗಳನ್ನು ಈ ಇಟಿಎಂ ಮಷಿನ್ ಗಳಲ್ಲಿ ಸ್ಕ್ಯಾನ್ ಮಾಡಿ ಅವಕಾಶ ನೀಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗುತ್ತಿದೆ. ಈ ಬಗ್ಗೆ ಪ್ರಯಾಣಿಕರು ಕೂಡ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಈ ಹಿಂದೆ ಬಿಎಂಟಿಸಿ ಬಸ್ಗಳಲ್ಲಿ ಟಿಕೆಟ್ ಮಷಿನ್ಗಳು ಕೈಕೊಟ್ಟು ಕಂಡಕ್ಟರ್ಗಳು ತೊಂದರೆ ಅನುಭವಿಸುತ್ತಿದ್ದರು. ನಂತರ ಹೊಸ ತಂತ್ರಜ್ಞಾನದ ಮಷಿನ್ ಖರೀದಿ ಮಾಡಲಾಗಿತ್ತು. ಇದೀಗ ಕೆಎಸ್ಆರ್ಟಿಸಿ ಕೂಡ ಹೊಸ ತಂತ್ರಜ್ಞಾನದ ಮಷಿನ್ಗಳನ್ನು ಖರೀದಿ ಮಾಡಲು ಮುಂದಾಗಿದೆ.