ಕೇರಳದಲ್ಲಿ ಕಾಡುತ್ತಿದೆ ಮೆದುಳು ತಿನ್ನುವ ಅಮೀಬಾ ಸೋಂಕು : ದ.ಕ ಜಿಲ್ಲೆಯಲ್ಲಿ ಹೈ ಅಲರ್ಟ್

ಮಂಗಳೂರು : ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೇರಳದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.

ಕೇರಳದಲ್ಲಿ ಈವರೆಗೆ ನಾಲ್ಕು ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಕೇರಳದಲ್ಲಿ ಅಮೀಬಾ ಸೋಂಕು ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಮಾಹಿತಿಗೆ ಸೂಚಿಸಲಾಗಿದೆ.

ನೆಗ್ಗೇರಿಯಾ ಫೌಲೇರಿ ಹೆಸರಿನ ಅಪರೂಪದ ಹಾಗೂ ಅಪಾಯಕಾರಿ ಸೂಕ್ಷ್ಮಾಣು ಜೀವಿಯಿಂದ ಹರಡುವ ಅಮೀಬಾ ಸೋಂಕು ಕೇರಳದಲ್ಲಿ ಕಂಡು ಬಂದಿದೆ. ಕಲುಷಿತ ನೀರಿನಲ್ಲಿರುವ ಪರಾವಲಂಬಿಯಲ್ಲದ ಅಮೀಬಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತದೆ. ಮೂಗಿನ ಮೂಲಕ ನಮ್ಮ ಶರೀರ ಸೇರುವ ಸೂಕ್ಷ್ಮಾಣು ಜೀವಿ, ಮೆದುಳಿನ ಅಂಗಾಂಶಕ್ಕೆ ಭಾರೀ ಹಾನಿ ಉಂಟುಮಾಡುತ್ತದೆ. ಇದರಿಂದ ಸಾವು ಕೂಡ ಸಂಭವಿಸುತ್ತದೆ.

ಸೋಂಕು ಹರಡುವ ಆತಂಕದ ಹಿನ್ನೆಲೆ ಗಡಿಭಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕಲುಷಿತ ನೀರಿನಲ್ಲಿ ಈಜಾಡಿದವರಲ್ಲಿ ಸೋಂಕು ಕಂಡು ಬರುತ್ತಿದೆ. ಹೀಗಾಗಿ ಮಳೆ ನೀರು ನಿಂತ ಹೊಂಡಗಳಲ್ಲಿ, ಕಲುಷಿತ ನೀರಿನಲ್ಲಿ ಈಜಾಡದಂತೆ ಸೂಚನೆ ನೀಡಲಾಗಿದೆ.

ಅಮೀಬಾ ಸೋಂಕು ಆತಂಕ ಹಿನ್ನೆಲೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿದ್ದು, ಸೋಂಕು ಹರಡದಂತೆ ತಡೆಯಲು ಕಲುಷಿತ ಜಲಮೂಲಗಳಲ್ಲಿ ಸ್ನಾನ ಮಾಡದಂತೆ ಸಲಹೆಗಳನ್ನು ನೀಡಿದ್ದಾರೆ.

ಈಜುಕೊಳಗಳಿಗೆ ಸರಿಯಾದ ಕ್ಲೋರಿನೇಷನ್ ಆಗಿರಬೇಕು. ಮಕ್ಕಳು ಹೆಚ್ಚಾಗಿ ಈ ರೋಗದಿಂದ ಬಳಲುತ್ತಿರುವ ಕಾರಣ ನೀರಿನೊಳಗೆ ಪ್ರವೇಶಿಸುವಾಗ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದ್ದಾರೆ.

ಈಜುವಾಗ ಮೂಗಿನ ಕ್ಲಿಪ್‌ಗಳನ್ನು ಬಳಸಿ ಎಂದು ಸಲಹೆ ನೀಡಿದ್ದಾರೆ. ಮುಕ್ತ-ಜೀವಂತ, ಪರಾವಲಂಬಿಯಲ್ಲದ ಅಮೀಬಾ ಬ್ಯಾಕ್ಟೀರಿಯಾಗಳು ಕಲುಷಿತ ನೀರಿನಿಂದ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಸಂಭವಿಸುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳಿದ್ದಾರೆ.

You cannot copy content from Baravanige News

Scroll to Top