ಕಾಪು : ಸಣ್ಣಪುಟ್ಟ ಸಾಲದ ಹೊರೆಯಿಂದ ಬಳಲುತ್ತಿದ್ದ ರಿಕ್ಷಾ ಮಾಲಕನೋರ್ವ ಹಿಂದೂ ರುದ್ರಭೂಮಿ ಬಳಿಯ ಶೆಡ್‌ನೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉದ್ಯಾವರ ಬೋಳಾರಗುಡ್ಡೆಯಲ್ಲಿ ನಡೆದಿದೆ.
ಬೋಳಾರ್‌ಗುಡ್ಡೆ ನಿವಾಸಿ, ಆಟೋ ಟೆಂಪೋ ಚಾಲಕ ಮತ್ತು ಮಾಲಕ ಮಹೇಶ್ ಪಾಲನ್ ಯಾನೆ ಮಾಹಿ (35) ನೇಣಿಗೆ ಶರಣಾದವರು.
ಉದ್ಯಾವರ ಗುಡ್ಡೆಯಂಗಡಿಯಲ್ಲಿ ಟೆಂಪೋ ರಿಕ್ಷಾ ಚಾಲಕ ಮತ್ತು ಮಾಲಕನಾಗಿ ದುಡಿಯುತ್ತಿದ್ದ ಮಹೇಶ್ ಸಾಲದ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದರು. ಸೋಮವಾರ ಬೆಳಿಗ್ಗೆ ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದಿದ್ದು, ಬಳಿಕ ಮನೆ ಸಮೀಪದಲ್ಲಿರುವ ಹಿಂದೂ ರುದ್ರಭೂಮಿಗೆ ತೆರಳಿ ಕಟ್ಟಿಗೆ ತುಂಬಿರುವ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಶ್ರಮ ಜೀವಿಯಾಗಿದ್ದ ಮಹೇಶ್ ಉದ್ಯಾವರ ಬಿಲ್ಲವ ಮಹಾಜನ ಸಂಘ, ಉದ್ಯಾವರ ಯುವಕ ಮಂಡಲ ಮತ್ತು ಗುಡ್ಡೆಯಂಗಡಿ ಫ್ರೆಂಡ್ಸ್ ಮೊದಲಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಸಾಮಾಜಿಕ ಚಿಂತನೆಯನ್ನು ಮೈಗೂಡಿಸಿಕೊಂಡಿದ್ದರು.
ಮೃತರು ಆ್ಯಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿರುವ ತಂದೆ ರಾಮದಾಸ್ ಪಾಲನ್, ತಾಯಿ, ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.