ಶಿರ್ವ : ಮೊಬೈಲ್ ಗೀಳಿನಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ ಎಂಬ ವಾದಗಳ ನಡುವೆಯೇ ಪುಟ್ಟ ಪೋರನೊಬ್ಬ ಮೊಬೈಲನ್ನೇ ಬಳಸಿಕೊಂಡು ವಿಶೇಷ ಪ್ರತಿಭೆಯನ್ನು ರೂಢಿಸಿಕೊಂಡಿದ್ದಾನೆ. ಅವನು 70ರಷ್ಟು ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸುತ್ತಾನೆ.
50ಕ್ಕೂ ಹೆಚ್ಚು ಪ್ರಾಡಕ್ಟ್/ಕಂಪೆನಿಯ ಲೋಗೋ ಗುರುತಿಸುತ್ತಾನೆ. ಅವನಿಗೆ ಕ್ರಿಕೆಟಿಗರೂ ಗೊತ್ತು, ವಾಹನ ನೋಡಿದ ಕೂಡಲೇ ಅದನ್ನು ಗುರುತಿಸುತ್ತಾನೆ! ದುಬೈಯಲ್ಲಿ ಎಚ್‌ಎಸ್‌ಬಿಸಿ ಬ್ಯಾಂಕ್ ಉದ್ಯೋಗಿಯಾಗಿರುವ ಶಿರ್ವದ ಪ್ರಶಾಂತ್ ಕುಂದರ್ ಮತ್ತು ಖಾಸಗಿ ಕಂಪೆನಿಯಲ್ಲಿ ಫೈನಾನ್ಸ್ ಮ್ಯಾನೇಜರ್ ಆಗಿರುವ ಶ್ವೇತಾ ಕುಂದರ್ ಅವರ ಪುತ್ರ ವ್ಯೋಮ್ ಕುಂದರ್ ಎಂಬ ಐದು ವರ್ಷದ ಪೋರನೇ ಈ ಸಾಧಕ ಪ್ರತಿಭೆ.
ವ್ಯೋಮ್ ದುಬೈಯಲ್ಲಿ ಹುಟ್ಟಿ ಅಲ್ಲೇ ಯುಕೆಜಿಯಲ್ಲಿ ಕಲಿಯುತ್ತಿದ್ದಾನೆ. ಪಟಪಟನೆ ಮಾತನಾಡುತ್ತಾ ಶಾಲೆಯ ಪ್ರತೀ
ಚಟುವಟಿಕೆಯಲ್ಲಿಯೂ ಭಾಗವಹಿಸುವ ಈತ ಶಿಕ್ಷಕಿಯರಿಗೂ ಅಚ್ಚುಮೆಚ್ಚು. ತುಳು ಕಲಿಯಲು ಊರಿಗೆ ಬಂದಿದ್ದಾನೆ!
ಪಟಪಟನೆ ಇಂಗ್ಲಿಷ್ ಮಾತನಾಡುವ ಈತನಿಗೆ ತುಳು ಸರಿಯಾಗಿ ಬರುವುದಿಲ್ಲ. ರಜಾದಿನದಲ್ಲಿ ತುಳು ಕಲಿಯುವ ಸಲುವಾಗಿ ಊರಿಗೆ ಬಂದಿದ್ದಾನೆ. ಅಜ್ಜ ಗೋವಿಂದ ಕುಂದರ್ ಮತ್ತು ಅಜ್ಜಿ ರಾಜೀವಿ ಕುಂದರ್ ಅವರಿಂದ ತುಳು ಕಲಿಯುತ್ತಿದ್ದಾನೆ. ಅವನಿಗೆ ಅಜ್ಜಿ ಜತೆ ತುಳು ಮಾತನಾಡಲು ಕಷ್ಟವಾಗುವಾಗ ಅಜ್ಜಿಯೇ ಇಂಗ್ಲಿಷ್ ಕಲಿಯಲಿ, ನಾನ್ಯಾಕೆ ತುಳು ಕಲಿಯಲಿ ಎಂದು ಮುಗ್ಧವಾಗಿ ಕೇಳುತ್ತಾನೆ.
ಏನೇನು ಮಾಡ್ತಾನೆ ವ್ಯೋಮ್?
*ಕ್ರಿಕೆಟ್, ಕ್ವಿಜ್, ವಿವಿಧ ವಾಹನಗಳು, ಬಣ್ಣಗಳು ಸೇರಿದಂತೆ ಆಸಕ್ತಿದಾಯಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾನೆ.
*ಕಳೆದ ಆರು ತಿಂಗಳಿನಿಂದ ಯಾರದೇ ಸಹಾಯವಿಲ್ಲದೆ ರಾಷ್ಟ್ರ ಧ್ವಜ ಗುರುತಿಸುವುದು, ವಾಹನಗಳು, ಕ್ರಿಕೆಟಿಗರು, ಯಾವುದೇ ಪ್ರಾಡಕ್ಟ್/ಕಂಪೆನಿಯ ಲೋಗೋ ತೋರಿಸಿದಲ್ಲಿ ಪಟಪಟನೆ ಹೇಳುವ ಚತುರತೆ ಇದೆ.
*ಐಪಿಎಲ್ ಟೀಮ್ ಗಳ ಬಹುತೇಕ ಆಟಗಾರ ರನ್ನು ಗುರುತಿಸುತ್ತಾನೆ.
*ಫುಟ್‌ಬಾಲ್ ಮತ್ತು ಕ್ರಿಕೆಟ್‌ನ ಸ್ಟಾರ್ ಆಟಗಾರರ ಹೆಸರು ಮತ್ತು ಅವರ ದೇಶವನ್ನು ಹೇಳುತ್ತಾನೆ.
*ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಂಡು ಕುತೂಹಲ ತೋರುತ್ತಾನೆ.