ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿತಕ್ಕೆ 7 ಮಂದಿ ಬಲಿ – ನದಿಗೆ ಬಿತ್ತು ಟ್ಯಾಂಕರ್‌

ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ.

ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ 7 ಮಂದಿ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಟ್ಯಾಂಕರ್‌ ಚಾಲಕ, ಕ್ಲೀನರ್‌ ಸೇರಿ 7 ಮಂದಿ ಮೃತಪಟ್ಟಿದ್ದಾರೆ.

ಗುಡ್ಡ ಕುಸಿದು 7 ಜನ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಮಣ್ಣಿನಡಿ ಸಿಲುಕಿರುವವರ ರಕ್ಷಿಸಲು ಸೂಚನೆ ನೀಡಿದ್ದೇನೆ. ಎನ್‌ಡಿ​ಆರ್​ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ ಎಂದು ಸಂಸದರು ತಿಳಿಸಿದರು.

ಭಾರೀ ಮಳೆಯಿಂದ ಹೆದ್ದಾರಿಯಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ರಕ್ಷಣಾ ತಂಡ ಶಾಂತಿ ನಾಯ್ಕ(37) ಎನ್ನುವವರ ಮೃತದೇಹವನ್ನು ಮಣ್ಣಿನಿಂದ ಹೊರಕ್ಕೆ ತೆಗೆದಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಗುಡ್ಡ ಕುಸಿತವಾದ ಜಾಗದಲ್ಲಿ ಒಂದು ಚಹಾ ಅಂಗಡಿ ಇತ್ತು. ಇಲ್ಲಿ ಕೆಲವರು ಚಹಾ ಸೇವಿಸುತ್ತಿದ್ದರು. ಹೀಗಾಗಿ ಎಷ್ಟು ಮಂದಿ ಅಲ್ಲಿದ್ದರು ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಟ್ಯಾಂಕರ್ ಚಾಲಕ ಮತ್ತು ಕ್ಲೀನರ್‌ ಟ್ಯಾಂಕರ್‌ ನಿಲ್ಲಿಸಿ ಚಹಾ ಸೇವಿಸುತ್ತಿದ್ದಾಗ ದುರಂತ ಸಂಂಭವಿಸಿದೆ.

You cannot copy content from Baravanige News

Scroll to Top