ಚಿಕ್ಕಮಗಳೂರು : ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಇದೇ ಆಗಸ್ಟ್ 15ರಿಂದ ಶ್ರೀ ಶಾರದಮ್ಮನವರ ದರ್ಶನಕ್ಕೆ ಹಾಗೂ ಗುರುಗಳ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಸೂಚಿಸಿ ಶೃಂಗೇರಿ ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೆ ಮೊದಲ ಬಾರಿಗೆ ಶೃಂಗೇರಿ ಶಾರದಾ ಮಠದಿಂದ ವಸ್ತ್ರ ಸಂಹಿತೆ ಜಾರಿ ಮಾಡಿದೆ.
ಆಗಸ್ಟ್ 15ರಿಂದ ಅಮ್ಮನ ದರ್ಶನಕ್ಕೆ ಆಗಮಿಸುವವರು ಭಾರತೀಯ ಸಾಂಪ್ರದಾಯಕ ಉಡುಗೆಯಲ್ಲೇ ಬರಬೇಕು. ಒಂದು ವೇಳೆ ಭಾರತೀಯ ಸಾಂಪ್ರದಾಯಕವಲ್ಲದ ಉಡುಗೆಯನ್ನು ತೊಟ್ಟು ಬಂದವರಿಗೆ ಶ್ರೀ ಶಾರದಾಂಬೆ ದೇವಸ್ಥಾನದ ಅರ್ಧ ಮಂಟಪದ ಒಳಗೆ ಪ್ರವೇಶವಿರುವುದಿಲ್ಲ. ಅಂತವರು ಹೊರಗಿನ ಪ್ರಕಾರದಿಂದಲೇ ದೇವರ ದರ್ಶನವನ್ನು ಪಡೆಯಬೇಕಾಗುತ್ತದೆ.
ಪುರುಷರಾದಲ್ಲಿ ಧೋತಿ ಶಲ್ಯ ಮತ್ತು ಉತ್ತರೀಯ ಹಾಗೂ ಮಹಿಳೆಯರು ಸೀರೆ ರವಿಕೆ, ಸಲ್ವಾರ್ – ದುಪಟ್ಟ ಅಥವಾ ಲಂಗ ದಾವಣಿಗಳಂತ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ದೇವರ ದರ್ಶನ ಮಾಡಬಹುದು ಎಂದು ಶೃಂಗೇರಿ ಶಾರದಾ ಪೀಠ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಶ್ರೀಮಠದ ಗುರುನಿವಾಸದಲ್ಲಿ ಪಾದಪೂಜೆ, ಭಿಕ್ಷಾವಂದನೆ ಹಾಗೂ ಗುರು ದರ್ಶನ ಸಂದರ್ಭದಲ್ಲಿ ಈ ಹಿಂದಿನಿಂದಲೂ ಈ ನಿಯಮ ಜಾರಿಯಲ್ಲಿದ್ದು, ಆಗಸ್ಟ್ 15 ರಿಂದ ಶ್ರೀ ಮಠದಲ್ಲಿ ಭಕ್ತರು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಹೊರಡಿಸಲಾಗಿದೆ.
ಶೃಂಗೇರಿ ಮಠದ ಈ ವಸ್ತ್ರಸಂಹಿತೆ ಜಾರಿ ಆದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಅರ್ಧಂಬರ್ಧ ಬಟ್ಟೆ ತೊಟ್ಟು ಕೆಲವು ಬುದ್ಧಿಹೀನರು ಪಿಕ್ನಿಕ್ ಸ್ಪಾಟ್ ನಂತೆ ದೇವಾಲಯಗಳನ್ನು ಪ್ರವೇಶಿಸುತ್ತಾರೆ. ಇಂತಹ ನಿಯಮಗಳಿಂದ ಅದಕ್ಕೆ ಕಡಿವಾಣ ಹಾಕಬಹುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.