ಪಕ್ಕದ ಮನೆಗೆ ಹೋದ ಬೆಕ್ಕು.. ಠಾಣೆಗೆ ಹೋದ ಮಾಲೀಕರು; ಅಪರೂಪದ ಪ್ರಕರಣಕ್ಕೆ ಹೈಕೋರ್ಟ್‌ ಹೇಳಿದ್ದೇನು?

ಬೆಂಗಳೂರು : ಇದು ಅಪರೂಪದಲ್ಲೊಂದು ಅಪರೂಪದ ಪ್ರಕರಣ. ಕರ್ನಾಟಕ ಹೈಕೋರ್ಟ್ ತನ್ನ ಇತಿಹಾಸದಲ್ಲಿ ಇಂತಹದೊಂದು ಪ್ರಕರಣದ ವಿಚಾರಣೆ ಮಾಡಿದ ಉದಾಹರಣೆ ಬಹುಶಃ ಎಂದಿಗೂ ಇರಲಿಕ್ಕಿಲ್ಲ. ಅಂತಹ ವಿರಳ ವಿಚಾರಣೆಯೊಂದನ್ನ ಘನ ನ್ಯಾಯಾಲಯ ಮಾಡಬೇಕಾದ ಪ್ರಸಂಗ ಹಾಗೂ ತಮ್ಮ ವೃತ್ತಿ ಜೀವನದಲ್ಲಿಯೇ ಒಂದು ವಿಚಿತ್ರ ಕೇಸ್ಗೆ ಬೆಂಗಳೂರು ಪೊಲೀಸರು ಚಾರ್ಜ್ಶೀಟ್ ಸಲ್ಲಿಸಿದ ಪ್ರಸಂಗವೊಂದು ನಡೆದು ಹೋಗಿದೆ.

ಆನೇಕಲ್ ತಾಲ್ಲೂಕಿನ, ಶಿಕಾರಿಪಾಳ್ಯದ ಸಿರಾಜ್ ಲೇಔಟ್ನ 2ನೇ ಕ್ರಾಸ್ ನಿವಾಸಿ ನಿಖಿತಾ ಅಂಜನಾ ನಾಯರ್ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೊಂದು ದೂರು ದಾಖಲಿಸಿದ್ದರು. ತನ್ನ ಮನೆ ಬೆಕ್ಕನ್ನು ಪಕ್ಕದ ಮನೆಯವರು ಒತ್ತೆಯಾಳಾಗಿಟ್ಟು ಕೊಂಡಿದ್ದಾರೆ ಎಂದು ತಾಹಾ ಹುಸೈನ್ ಬಿನ್ ಖಾಲಿದ್ ಮೆಹಬೂಬ್ ಎಂಬುವವರು ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ನಿಖಿತಾ ಅಂಜನಾ ಅಯ್ಯರ್‌ ಸಲ್ಲಿಸಿದ ದೂರಿನ ಪ್ರಕಾರ ಅವರ ಡೈಸಿ ಅನ್ನೋ ಬೆಕ್ಕು ಪದೇ ಪದೇ ತಾಹಾ ಹುಸೈನ್ ಮನೆಗೆ ಹೋಗಿ ಕಿರಿ ಕಿರಿ ಮಾಡುತ್ತದೆ ಎಂದು ಅದನ್ನು ಒತ್ತೆಯಾಗಿಟ್ಟುಕೊಂಡಿದ್ದಾರೆ. ಅವರು ನಮ್ಮ ಮುದ್ದಿನ ಬೆಕ್ಕನ್ನು ಒತ್ತೆಯಾಳಾಗಿಟ್ಟುಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ದೂರು ದಾಖಲಿಸಿದರು. ಕ್ರೈಂಗಳನ್ನು ಬೆನ್ನಟ್ಟಿ ಪ್ರಕರಣ ಭೇದಿಸಬೇಕಿದ್ದ ಪೊಲೀಸರು ಈ ದೂರನ್ನು ದಾಖಲಿಸಿಕೊಂಡು ಐಪಿಸಿ ಸೆಕ್ಷನ್ 504, 506 ಮತ್ತು 509ರ ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ. ಜೀವ ಬೆದರಿಕೆ ಶಾಂತಿಭಂಗ ಹಾಗೂ ಮಹಿಳೆಯ ಘನತೆಗೆ ಧಕ್ಕೆ ತಂದ ಆರೋಪದ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿ ಟ್ರಯಲ್ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು.

ತಾಹಾ ಹುಸೈನ್ ವಿರುದ್ಧ ಸಲ್ಲಿಕೆಯಾಗಿದ್ದ ಈ ಅಪರೂಪದ ಪ್ರಕರಣವನ್ನು ವಿಚಾರಣೆ ಮಾಡಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಪೀಠ, ಆರೋಪಿ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ. ವಾದ ಆಲಿಸಿದ ಹೈಕೋರ್ಟ್, 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್ ನೀಡಿದ್ದ ವಿಚಾರಣೆ ಆದೇಶಕ್ಕೆ ತಡೆ ನೀಡಿದೆ. ಬೆಕ್ಕುಗಳು ಕಿಟಕಿಯಿಂದ ಪಕ್ಕದ ಮನೆಯ ಒಳಗೆ ಹೋಗುವುದು ಬರೋದು ಸಾಮಾನ್ಯ ಇಂತಹ ಕ್ಷುಲ್ಲಕ ಕೇಸ್ ಬಗ್ಗೆ ಮುಂದಿನ ವಿಚಾರಣೆ ಅಗತ್ಯವಿಲ್ಲ. ಇದು ಅಪರಾಧಿಕ ನ್ಯಾಯಿಕ ವ್ಯವಸ್ಥೆಗೆ ಅಡ್ಡಿ ಟ್ರಯಲ್ ಕೋರ್ಟ್ ಪ್ರಕ್ರಿಯಿಯೆಗೆ ತಡೆ ನೀಡಬೇಕು ಎಂದು ಆರೋಪಿ ಪರ ವಕೀಲ ಜಿ. ದೇವರಾಜ್ ವಾದ ಮಂಡನೆ ಮಾಡಿದ್ದರು. ಎಲ್ಲವನ್ನೂ ಆಲಿಸಿದ ನ್ಯಾಯಮೂರ್ತಿಗಳು ಈ ಕೇಸ್ನಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದ ಬೇಸರ ವ್ಯಕ್ತಪಡಿಸಿ ಮುಂದಿನ ವಿಚಾರಣೆಗೆ ತಡೆ ನೀಡಿದೆ.

Scroll to Top