ಮಾನನಷ್ಟ ಪ್ರಕರಣ: ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಗೆ ದಿಲ್ಲಿ ನ್ಯಾಯಾಲಯದಿಂದ ಸಮನ್ಸ್‌!

ಹೊಸದಿಲ್ಲಿ: ಮಾನನಷ್ಟ ಪ್ರಕರಣವೊಂದರಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿಗೆ ದಿಲ್ಲಿ ನ್ಯಾಯಾಲಯವೊಂದು ಬುಧವಾರ ಸಮನ್ಸ್‌ ಜಾರಿಗೊಳಿಸಿದೆ.

ಧ್ರುವ್ ರಾಠಿ ನನ್ನನ್ನು ʼಹಿಂಸಾತ್ಮಕ ಮತ್ತು ನಿಂದಿಸುವʼ ಟ್ರೋಲ್ ಎಂದು ಕರೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕ ಸುರೇಶ್‌ ನಕುವಾ ಅವರು ಧ್ರುವ್ ರಾಠಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ತಮಗೆ ಮಧ್ಯಂತರ ಪರಿಹಾರ ದೊರಕಿಸಿಕೊಡುವಂತೆ ನಖುವಾ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯ ರಾಠಿ ಅವರಿಗೆ ನೋಟಿಸ್‌ ನೀಡಿದೆ. ಆಗಸ್ಟ್ 6 ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಖುವಾ ಪರವಾಗಿ ವಕೀಲರಾದ ರಾಘವ್ ಅವಸ್ಥಿ ಮತ್ತು ಮುಖೇಶ್ ಶರ್ಮಾ ವಾದ ಮಂಡಿಸಿದರು.

ತಮ್ಮನ್ನು ‘ಹಿಂಸಾತ್ಮಕ ಮತ್ತು ನಿಂದನಾತ್ಮಕ ಟ್ರೋಲ್‌ಗಳ’ ಗುಂಪಿನ ಭಾಗ ಎಂದು ರಾಠಿ ಕರೆದಿದ್ದಾರೆ ಡಿಜಿಟಲ್‌ ವೇದಿಕೆಗಳಲ್ಲಿ ಅವರ ಹೇಳಿಕೆ ವ್ಯಾಪಕವಾಗಿ ಹಬ್ಬಿದ್ದು ಅವರ ಆರೋಪಗಳಿಗೆ ಯಾವುದೇ ಆಧಾರಗಳಿಲ್ಲ. ಈ ಆರೋಪಗಳಿಂದಾಗಿ ತಾನು ವ್ಯಾಪಕ ಖಂಡನೆ ಮತ್ತು ಅಪಹಾಸ್ಯಕ್ಕೆ ತುತ್ತಾಗಿದ್ದೇನೆ ಎಂದು ಸುರೇಶ್‌ ವಿವರಿಸಿದ್ದಾರೆ.

ಇದು ತನ್ನ ವ್ಯಕ್ತಿತ್ವ ಹರಣಕ್ಕಾಗಿ ಮಾಡಿದ ಉದ್ದೇಶಪೂರ್ವಕ ಪ್ರಚಾರ. ಅವರ ಆರೋಪ ದೂರಗಾಮಿ ಪರಿಣಾಮ ಉಂಟು ಮಾಡುವ ಅಪನಂಬಿಕೆಯ ಬೀಜಗಳನ್ನು ಬಿತ್ತಿದೆ. ಇಂತಹ ಸುಳ್ಳು ಆಪಾದನೆಗಳ ಪರಿಣಾಮ ಬಹುವಿಧವಾಗಿದ್ದು ಇದು ತನಗೆ ಸರಿಪಡಿಸಲಾಗದಂತಹ ಧಕ್ಕೆ ಉಂಟು ಮಾಡಿದೆ ಎಂಬುದಾಗಿ ಅವರು ತಿಳಿಸಿದ್ದಾರೆ.

Scroll to Top