ನಕಲಿ ದಾಖಲೆ ನೀಡಿ ಸಾಲ ಪಡೆದು ವಂಚನೆ ; ದೂರು

ಮಣಿಪಾಲ: ಇಲ್ಲಿನ ಕೋ ಅಪರೇಟಿವ್‌ ಸೊಸೈಟಿಯೊಂದಕ್ಕೆ ನಕಲಿ ದಾಖಲೆ ನೀಡಿ ಸಾಲ ಪಡೆದು ವಂಚಿಸಿರುವ ಬಗ್ಗೆ ಮಹಮ್ಮದ್‌ ಶಕೀರ್‌, ಅಬ್ದುಲ್‌ ನಾಸಿರ್‌, ಅನ್ವರ್‌ ಹುಸೇನ್‌, ಹಸೀನಾ ಬಾನು ಅವರ ವಿರುದ್ಧ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2020ರ ಮಾ. 4ರಿಂದ 2024ರ ಮೇ 15ರ ಮಧ್ಯಾವಧಿಯಲ್ಲಿ ಆರೋಪಿ ಮಹಮ್ಮದ್‌ ಶಕೀರ್‌ 70,00,000 ರೂ. ಸಾಲ ನೀಡುವಂತೆ ಕೋ ಅಪರೇಟಿವ್‌ ಸೊಸೈಟಿಗೆ ತಿಳಿಸಿದ್ದು, ಸಾಲಕ್ಕೆ ಭದ್ರತೆಯಾಗಿ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾ.ಪಂ. ವ್ಯಾಪ್ತಿಯ ಸರ್ವೇ ನಂಬರ್‌ 333/2ಪಿ5 ರಲ್ಲಿ ನಿರ್ಮಿಸಿರುವ ಜ್ಯೂ-ಲಿಯೋ ರೆಸಿಡೆನ್ಸಿ ಕಟ್ಟಡದ ನೆಲ ಅಂತಸ್ತಿನಲ್ಲಿರುವ ತನ್ನ ಸಂಪೂರ್ಣ ಮಾಲಕತ್ವದ್ದು ಎಂದು ನಂಬಿಸಿದ್ದಾನೆ.

308.82 ಚದರ ಮೀ. ವಿಸ್ತೀರ್ಣದ ಪ್ಲಾಟ್‌(ಡೋರ್‌ ನಂಬರ್‌ 3-315/10, ಫ್ಲಾಟ್‌ ನಂ07) ದಾಖಲೆ ಪತ್ರಗಳನ್ನು ನೀಡಿದ್ದು, ಸೊಸೈಟಿಯಿಂದ 20,00,000 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದ. ಈ ಸಾಲಕ್ಕೆ ಆರೋಪಿಗಳಾದ ಅಬ್ದುಲ್‌ ನಾಸಿರ್‌, ಅನ್ವರ್‌ ಹುಸೇನ್‌, ಹಸೀನಾ ಬಾನು ಜಾಮೀನುದಾರರಾಗಿದ್ದರು.
ಮಹಮ್ಮದ್‌ ಶಕೀರ್‌ ಈಗಾಗಲೇ ಅಸಲಿ ದಾಖಲೆ ಪತ್ರಗಳನ್ನು ಕುಂದಾಪುರದಲ್ಲಿರುವ ಕೋ ಅಪರೇಟಿವ್‌ ಸೊಸೈಟಿಗೆ ನೀಡಿ ಅಲ್ಲಿಂದ 55,00,000 ಲಕ್ಷ ರೂ. ಸಾಲವನ್ನು ಪಡೆದಿದ್ದ.ಮೋಸ, ವಂಚನೆ ಮಾಡುವ ಉದ್ದೇಶದಿಂದ ಕುಂದಾಪುರದ ಸೊಸೈಟಿಗೆ ನೀಡಿದ್ದ ಅಸಲಿ ದಾಖಲೆ ಪತ್ರಗಳನ್ನು ನಕಲಿ ಮಾಡಿ, ಇದನ್ನೇ ಅಸಲಿ ದಾಖಲೆ ಪತ್ರಗಳು ಎಂದು ಬ್ಯಾಂಕ್‌ ಅಧಿಕಾರಿಯವರಲ್ಲಿ ನಂಬಿಸಿ ಸಾಲ ಪಡೆದುಕೊಂಡು ವಂಚಿಸಿದ್ದಾನೆ.

ಜಾಮೀನುದಾರರಾಗಿ ಸಹಿ ಮಾಡಿ ದಾಖಲೆ ನೀಡಿದ್ದವರಿಗೆ ಈ ಬಗ್ಗೆ ಗೊತ್ತಿದ್ದರೂ ಎಲ್ಲರೂ ಒಟ್ಟಾಗಿ ಸೇರಿಕೊಂಡು ಮೋಸ ಮಾಡಿದ್ದಾರೆ ಎಂದು ದೂರು ದಾಖಲಿಸಲಾಗಿದೆ.

Scroll to Top