ಶಿರ್ವ : ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 2008ರಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಆರೋಪಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
80 ಬಡಗಬೆಟ್ಟು ಮಣಿಪಾಲ ದುರ್ಗಾ ಕಲಡ್ಕ ನಿವಾಸಿ ರಾಜೇಂದ್ರ ಆಲಿಯಾಸ್ ರಾಜ ವಡ್ಡರ್ ಎಂಬ ವಾರೆಂಟ್ ಅಸಾಮಿಯನ್ನು ಶಿರ್ವ ಪೊಲೀಸ್ ಉಪನಿರೀಕ್ಷಕರಾದ ಸಕ್ತಿವೇಲು.ಇ (ಕಾನೂನು ಮತ್ತು ಸುವ್ಯವಸ್ಥೆ) ಹಾಗೂ ಅನಿಲ್ ಕುಮಾರ್ ಟಿ. ನಾಯ್ಕ (ತನಿಖೆ) ಅವರ ಮಾರ್ಗದರ್ಶನದಂತೆ ಶಿರ್ವ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಧರ್ಮಪ್ಪ ಮತ್ತು ಪಿಸಿಗಳಾದ ರಘು ಮತ್ತು ರಿತೇಶ್ ಜು.24 ರಂದು ಬೆಂಗಳೂರಿನಲ್ಲಿ ಬಂಧಿಸಿ ಕರೆದುಕೊಂಡು ಬಂದಿದ್ದರು.
ಆರೋಪಿಯನ್ನು ಪತ್ತೆ ಮಾಡಲು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ಸಿಡಿಆರ್ ವಿಭಾಗದ ದಿನೇಶ್ ಹಾಗೂ ಶಿರ್ವ ಠಾಣೆಯ ಭಾಸ್ಕರ್ ಸಹಕರಿಸಿದ್ದರು.ಆರೋಪಿಯನ್ನು ಪಿಸಿಗಳಾದ ಭಾಸ್ಕರ್ ಮತ್ತು ಸೋಮಪ್ಪ ಜು. 25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ಆ.8 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈತನ ಮೇಲೆ ಉಡುಪಿ ನಗರ, ಹೆಬ್ರಿ ,ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಹಿರಿಯಡ್ಕ ಕಾರಾಗೃಹಕ್ಕೆ ಕಳುಹಿಸಲಾಗಿದೆ.