Sunday, September 8, 2024
Homeಸುದ್ದಿಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆಯಾ..? ರಾಜಸ್ಥಾನದಿಂದ ಬಂದ ಮಾಂಸದ ಬಾಕ್ಸ್ ಗೆ ತಡೆ

ಬೆಂಗಳೂರಿಗೆ ನಾಯಿ ಮಾಂಸ ಸರಬರಾಜು ಆಗುತ್ತಿದೆಯಾ..? ರಾಜಸ್ಥಾನದಿಂದ ಬಂದ ಮಾಂಸದ ಬಾಕ್ಸ್ ಗೆ ತಡೆ

ಬೆಂಗಳೂರು, (ಜುಲೈ 26): ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದಲ್ಲಿ ನಾಯಿ ಮಾಂಸ ಬೆರೆಸಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಇಂದು (ಜುಲೈ 26) ರಾಜಸ್ಥಾನದಿಂದ ಬಂದ ಮಟನ್​ ಮಾಂಸದ ಬಾಕ್ಸ್​ಗಳನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರು ತಡೆ ಹಿಡಿದಿದ್ದಾರೆ. ಪ್ರತಿನಿತ್ಯ ವಿವಿಧ ರಾಜ್ಯಗಳಿಂದ ಬೆಂಗಳೂರಿಗೆ ಬರುವ ರೈಲುಗಳಲ್ಲಿ ಅಕ್ರಮವಾಗಿ ಮಾಂಸ ಸರಬರಾಜು ಆಗುತ್ತಿದೆ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಹಿಂದೂ ಕಾರ್ಯಕರ್ತರು, ಇಂದು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು, ಜೈಪುರ ರೈಲು ಬಂದಾಕ್ಷಣ ದಾಳಿ ಮಾಡಿ ಮಾಂಸದ ಬಾಕ್ಸ್​ಗಳನ್ನು ತಡೆಹಿಡಿದಿದ್ದಾರೆ.

ಹಿಂದೂಪರ ಸಂಘಟನೆಯ ಪುನೀತ್ ಕೆರೆಹಳ್ಳಿ ನೇತೃತ್ವದ ತಂಡ ಜೈಪುರ ರೈಲಿನ ಮೇಲೆ ದಾಳಿ ಮಾಡಿದ್ದು, ಮಟನ್ ಮಾಂಸವನ್ನು ಎತ್ತಿ ನೋಡಿದ್ದಾರೆ. ಇದರಲ್ಲಿ ನಾಯಿ ಮಾಂಸ ಇದೆ ಎಂದು ಆರೋಪಿಸಿದ್ದಾರೆ. ಇದೇ ವಿಚಾರಕ್ಕೆ ಅಬ್ದುಲ್ ರಜಾಕ್ ಮತ್ತು ಪುನೀತ್ ಕೆರೆಹಳ್ಳಿ ಮಧ್ಯೆ ವಾಗ್ವಾದ ನಡೆದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಅಬ್ದುಲ್ ರಜಾಕ್, ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಮಾಡಲು ಬಂದಿದ್ದ. ರೋಲ್ಕಾಲ್ಗೆ ಅವಕಾಶ ಕೊಟ್ಟಿಲ್ಲ ಎಂದು ಕುರಿ ಮಾಂಸದ ಜತೆ ನಾಯಿ ಮಾಂಸ ಬೆರೆಸಿದ ಆರೋಪ ಮಾಡಿದ್ದಾನೆ. ಇದು ಅಕ್ರಮ ಬ್ಯುಸಿನೆಸ್ ಅಲ್ಲ. ನಮ್ಮ ಬಳಿ ಎಲ್ಲ ಸರ್ಟಿಫಿಕೇಟ್ ಇದೆ. ಎಲ್ಲ ಬಾಕ್ಸ್ಗಳಲ್ಲಿ ಕುರಿ ಮಾಂಸ ಮಾತ್ರವಿದೆ. ನಾವು 12 ವರ್ಷದಿಂದ ಈ ಬ್ಯುಸಿನೆಸ್ ಮಾಡುತ್ತಿದ್ದೇವೆ. ಅವರೇ ಬಾಕ್ಸ್ ತೆರೆದಿದ್ದಾರೆ, ಕುರಿ ಮಾಂಸ ನೋಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಬಿಬಿಎಂಪಿ ಆಹಾರ ಸುರಕ್ಷತೆ ಅಧಿಕಾರಿ ಸುಬ್ರಮಣ್ಯ, ನಾವು ಒಟ್ಟು ನಾಲ್ಕು ಬಾಕ್ಸ್ ಗಳಿಂದ ಸ್ಯಾಂಪಲ್ ಕಲೆಕ್ಟ್ ಮಾಡಿದ್ದೇವೆ. ವಿವಿಧ ಭಾಗಗಳಿಂದ ಮಾಂಸವನ್ನು ಸ್ಯಾಂಪಲ್‌ ಆಗಿ ಪಡೆದಿದ್ದೇವೆ. ಇದನ್ನು ಲ್ಯಾಬ್ ಗೆ ರವಾನಿಸಿ ಪರೀಕ್ಷಿಸಲಾಗುತ್ತೆ. ಇದರ ವರದಿ ಬರುವುದಕ್ಕೆ 14 ದಿನಗಳ ಕಾಲವಕಾಶ ಬೇಕು. ಮೇಲ್ನೋಟಕ್ಕೆ ನೋಡಿ ಇದು ಯಾವ ಮಾಂಸ ಎಂದು ಹೇಳಲಾಗುವುದಿಲ್ಲ. ಈ ಮಾಂಸದ ಗುಣಮಟ್ಟ ಹಾಗೂ ಯಾವುದರ ಮಾಂಸ ಎಂಬ ದೃಢೀಕರಣ ಟೆಸ್ಟಿಂಗ್ ನಲ್ಲಿ ಗೊತ್ತಾಗುತ್ತೆ. ಒಂದು ವೇಳೆ ಇದು ದೂರುದಾರರ ದೂರಿನಂತೆ ನಾಯಿ ಮಾಂಸ ಆಗಿದ್ದರೆ ಮಾಲೀಕ‌ನ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಕುರಿ ಮಾಂಸವೇ ಆಗಿದ್ದರೆ ದೂರುದಾರನ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News