ಅಧಿಕಾರಿಗಳ ಸೋಗಿನಲ್ಲಿ ಬರ್ತಾರೆ ಆಗಂತುಕರು ; ಬ್ರಹ್ಮಾವರದಲ್ಲಿ ಉದ್ಯಮಿ ಮನೆಗೆ ಬಂದ ತಂಡ!

ಉಡುಪಿ : ಕರಾವಳಿಯಲ್ಲಿ ಭಯ ಸೃಷ್ಟಿಸುತ್ತಿರುವ ಚಡ್ಡಿ ಗ್ಯಾಂಗ್, ಪ್ಯಾಂಟ್ ಗ್ಯಾಂಗ್ ಗಳ ನಡುವೆ ಉಡುಪಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಬೆಳ್ಳಂಬೆಳಗ್ಗೆ ಎರಡು ಕಾರುಗಳಲ್ಲಿ ಪೊಲೀಸ್‌ ಹಾಗೂ ಅಧಿಕಾರಿಗಳ ಸೋಗಿನಲ್ಲಿ ಮಣೂರಿನ ಉದ್ಯಮಿಯೊಬ್ಬರ ಮನೆಗೆ ಅಪರಿಚಿತರ ತಂಡವೊಂದು ದಾಳಿಗೆ ವಿಫಲ ಯತ್ನ ನಡೆಸಿದೆ. ಈ ಬಗ್ಗೆ ಮನೆ ಮಾಲಕಿ ಕವಿತಾ ಕೋಟ ಠಾಣೆಗೆ ದೂರು ನೀಡಿದ್ದಾರೆ.

ಎಚ್ಚರಿಸಿದ ಸೈನ್‌ ಇನ್‌ ಸೆಕ್ಯುರಿಟಿ :

ಜುಲೈ 25ರಂದು ಬೆಳಗ್ಗೆ 8.30 ಗಂಟೆಗೆ ಮನೆಯ ಹೊರಗಿನಿಂದ ಯಾರೋ ಬಾಗಿಲು ಬಡಿದ ಶಬ್ದವಾಗಿತ್ತು. ಆಗ ನಿರ್ಲಕ್ಷಿಸಿದ್ದು, 9 ಗಂಟೆಗೆ ಹೊರಗೆ ಬಂದು ನೋಡಿದಾಗ ಯಾರೂ ಇರಲಿಲ್ಲ. ಈ ನಡುವೆ ಮನೆಯ ಸಿಸಿಟಿವಿ ಮೇಲೆ ನಿಗಾ ಇಡುತ್ತಿರುವ ಕುಂದಾಪುರದ ಸೈನ್‌ ಇನ್‌ ಸೆಕ್ಯುರಿಟಿ ಸಂಸ್ಥೆಯ ಕೃಷ್ಣ ಎಂಬವರು ಕರೆ ಮಾಡಿ, ನಿಮ್ಮ ಮನೆಗೆ ಸ್ವಿಫ್ಟ್‌ ಮತ್ತು ಇನೋವಾ ಕಾರಿನಲ್ಲಿ 6-8 ಜನ ಮಂದಿ ಆಗಮಿಸಿ ಗೇಟು ತೆರೆಯಲು ಯತ್ನಿಸಿದ್ದರು. ಸಾಧ್ಯವಾಗದಿದ್ದಾಗ ಕಾಂಪೌಂಡ್‌ ಹಾರಿ ಮನೆಗೆ ಬಂದು ಬಾಗಿಲು ಹಾಗೂ ಕಿಟಕಿಯನ್ನು ಬಲಾತ್ಕಾರವಾಗಿ ತೆಗೆಯಲು ಪ್ರಯತ್ನಿಸಿರುವುದಾಗಿ ತಿಳಿಸಿದ್ದಾರೆ.

ದೃಶ್ಯ ಸಿಸಿಟಿವಿಯಲ್ಲಿ ಸೆರೆ :

ಒಂದು ಕಾರಿನಲ್ಲಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಧರಿಸಿದ್ದ ಒಬ್ಬ ಹಾಗೂ ಇತರ ನಾಲ್ವರು, ಮತ್ತೊಂದು ಕಾರಿನಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿದ್ದ ಒಬ್ಬ ಹಾಗೂ ಇತರರು ಸೇರಿ ಒಟ್ಟು 8 ಮಂದಿ ಇದ್ದರು ಎಂದು ಶಂಕಿಸಲಾಗಿದೆ. 6 ಜನ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಳೆಹನಿಯುತ್ತಿದ್ದಾಗ ಕಾರಿನಿಂದ ಇಳಿದ ತಂಡ ಗೇಟು ತೆರೆಯಲು ಯತ್ನಿಸಿದೆ. ಸಾಧ್ಯವಾಗದಿದ್ದಾಗ ಗೇಟಿಗೆ ಗುದ್ದಿ ಸದ್ದು ಮಾಡಿದೆ. ಆ ಬಳಿಕ ಇನ್ನೊಂದು ಮಗ್ಗುಲಿನಿಂದ ಹೋಗಿ ಕಾಂಪೌಂಡ್‌ನಿಂದ ಬಾವಿಕಟ್ಟೆಗೆ ಇಳಿದು ಅಂಗಳಕ್ಕೆ ಹೋಗಿ ಮುಖ್ಯ ಬಾಗಿಲ ಬಳಿ ಹೋಗಿದೆ. ಆಗಲೂ ಬಾಗಿಲು ತೆರೆಯದಿದ್ದಾಗ ತಂಡ ಅಲ್ಲಿಂದ ಕಾಲ್ಕಿತ್ತಿದೆ.

Scroll to Top