ಉಡುಪಿ : ಅಂತರ್ಜಲ ವೃದ್ಧಿಗೆ ಸಹಕಾರಿ ಬ್ಯಾಂಕ್ನಿಂದ ಮಳೆ ನೀರು ಕೊಯ್ಲು, ರಾಜ್ಯದಲ್ಲೇ ಮೊದಲು

ಉಡುಪಿ : ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ಕಳೆದ ಒಂದು 15 ದಿನಗಳಿಂದ ಜಿಲ್ಲೆಯಲ್ಲಿ ಮಳೆ ಅಧಿಕವಾಗಿ ಜಿಲ್ಲೆ ಸಾಕಷ್ಟು ನಷ್ಟವನ್ನು ಕಂಡಿದೆ. ಇಲ್ಲಿ ಬಿದ್ದ ನೀರು ಹೊಳೆ, ತೊರೆಗಳ ಮೂಲಕ ಸಾಗರ ಸೇರಿ ಬರಿದಾಗುತ್ತಿದೆ. ಮತ್ತೆ ಬೇಸಿಗೆಯಲ್ಲಿ ನೀರು ಇಲ್ಲದೆ ಪರದಾಡುವ ಪರಿಸ್ಥಿತಿ ಇತ್ತೀಚಿನ ದಿನಗಳಲ್ಲಿ ಈ ಜಿಲ್ಲೆಗೆ ಶಾಪದಂತೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಅಂತರ್ಜಲ ಮರುಪೂರಣವಾಗದೆ ಇರುವುದು ಎನ್ನುವುದು ತಜ್ಞರ ಅಭಿಪ್ರಾಯ.

ಮಲೆನಾಡಿಗೆ ಹತ್ತಿರ ಇರುವ ಮತ್ತು ಪಶ್ಚಿಮ‌ ಘಟ್ಟಗಳ ತಪ್ಪಲಿನಲ್ಲಿ ಬರುವ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಕೆಲವು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಅಂತರ್ಜಲ ಮರುಪೂರಣ ಮಾಡುವ ಯೋಚನೆ ಈ ಭಾಗದಲ್ಲಿ ಜಾರಿಗೆ ಬರುತ್ತಿದೆ. ಕುಂದಾಪುರ ತಾಲೂಕಿನ ಕಮಲಶಿಲೆ ಸಮೀಪದ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದೆ. ಈ ಪದ್ದತಿ ಅಳವಡಿಸಿಕೊಂಡ ರಾಜ್ಯದ ಮೊದಲ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಗೆ ಪಾತ್ರವಾಗಿದೆ.

ಕಮಲಶಿಲೆ ಮಾನಂಜೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ತಮ್ಮ ಕಚೇರಿಯ ಮೇಲ್ಚಾವಣಿಗೆ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಂಡಿದೆ. ಸುಮಾರು 2000 ಸ್ಕ್ವೇರ್ ಫಿಟ್ ಅಗಲದ ಮೇಲ್ಚಾವಣಿಯಲ್ಲಿ ಬೀಳುವ ಮಳೆ ನೀರು, ಸಂಪೂರ್ಣವಾಗಿ ಪೈಪ್ ಮೂಲಕ ಸಂಗ್ರಹವಾಗಿ ಫಿಲ್ಟರ್ ಮೂಲಕ ಸೋಸಿ ಸಂಸ್ಥೆಯ ಬಾವಿಗೆ ಹೋಗುವ ವ್ಯವಸ್ಥೆಯನ್ನು ಮಾಡಲಾಗಿದೆ. ಮಳೆ ನೀರು ಸಂಪೂರ್ಣವಾಗಿ ಬಾವಿಯ ಮೂಲಕ ಇಂಗುವ ವ್ಯವಸ್ಥೆ ಮಾಡಲಾಗಿದೆ. ಸದ್ಯ ಮಾನಂಜೆ ಪ್ರಧಾನ ಕಚೇರಿಯಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆ ಮಾಡಲಾಗಿದ್ದು, ಇನ್ನುಳಿದ ಬ್ರ್ಯಾಂಚ್ಗಳಿಗೂ ಮಳೆ ನೀರು ಕೊಯ್ಲು ಅಳವಡಿಸುವ ಯೋಜನೆ ಸಂಸ್ಥೆಗೆ ಇದೆ.

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಚಿಂತನೆ

ಮಳೆ ನೀರು ಕೊಯ್ಲು ವಿಧಾನ ಅಳವಡಿಕೆಗೆ ಮನಂಜೆ ಸಹಕಾರಿ ಸಂಸ್ಥೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ಚಿಂತಿಸಿದೆ. ವ್ಯವಹಾರಿಕ ದೃಷ್ಟಿಯಿಂದ ಸಹಕಾರಿ ಸಂಸ್ಥೆಗಳು ನಡೆಯುತ್ತಿರುವ ಈ ಕಾಲದಲ್ಲಿ ಪ್ರಕೃತಿಗೂ ಕೂಡ ನಾವು ಪಡೆದುಕೊಂಡದ್ದನ್ನ ಮರುಪೂರಣ ಮಾಡಬೇಕು ಆಗ ಮುಂದಿನ ಪೀಳಿಗೆ ಪ್ರಕೃತಿಯ ಉಪಯೋಗವನ್ನ ಪಡೆದುಕೊಳ್ಳಬಹುದು ಎನ್ನುವುದು ಸಂಸ್ಥೆಯ ಉದ್ದೇಶ.

ಒಟ್ಟಾರೆಯಾಗಿ ಮಾನಂಜಿ ವ್ಯವಸಾಯ ಸಹಕಾರಿ ಬ್ಯಾಂಕ್ ಈಗ ಪರಿಸರಸ್ನೇಹಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡಿದೆ. ಈ ಮೂಲಕ ರಾಜ್ಯದ ಮೊದಲ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದೆ. ಅಂತರ್ಜಲ ವೃದ್ಧಿಗೆ ಸಹಕಾರಿ ಸಂಸ್ಥೆಯೊಂದು ಕೊಡುಗೆ ನೀಡಲು ಹೊರಟಿರುವುದು ಉಳಿದ ಸಹಕಾರಿ ಸಂಸ್ಥೆಗಳಿಗೆ ಮಾದರಿಯಾಗಲಿ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top