ಕಿರಿಮಂಜೇಶ್ವರ – ಬಾವಿಯಲ್ಲಿರುವ ಮೊಸಳೆ ಹಿಡಿಯಲು ಕಸರತ್ತು

ಉಡುಪಿ :  ಬೈಂದೂರಿನ ಕಿರಿಮಂಜೇಶ್ವರದಲ್ಲಿ  ಬಾವಿಯೊಂದರಲ್ಲಿ ಸಿಕ್ಕಿಹಾಕಿಕೊಂಡಿರುವ ಮೊಸಳೆಯನ್ನು ಹಿಡಿಯಲು ನಡೆಸಿದ ಕಾರ್ಯಾಚರಣೆ ಇನ್ನೂ ಫಲಪ್ರದವಾಗಿಲ್ಲ. ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯೊಂದರಲ್ಲಿ ಮಂಗಳವಾರ ಮೊಸಳೆ ಪ್ರತ್ಯಕ್ಷವಾಗಿದೆ.

ನಾಗೂರು ಗ್ರಾಮದ ಒಡೆಯ ಮಠ ವಿಶ್ವನಾಥ ಉಡುಪರ ಮನೆಯ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ಪಡೆದ ಬೈಂದೂರು ಅರಣ್ಯ, ಪೊಲೀಸ್ ಇಲಾಖೆ ಸಿಬ್ಬಂದಿ ಅಗ್ನಿಶಾಮಕ ದಳದವರ ಸಹಾಯದೊಂದಿಗೆ ಬಾವಿಗೆ ಬಲೆ ಹಾಕಿ ಕಾರ್ಯಾಚರಣೆ ನಡೆಸಿದರೂ ಮೊಸಳೆ ಬಲೆಗೆ ಬಿದ್ದಿಲ್ಲ.

ಬಳಿಕ ಸ್ಥಳೀಯರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಗೆ ಬೋನ್ ಇಟ್ಟು ನಾಗೂರು ನೆಟ್ವರ್ಕ್ ಆ್ಯಂಡ್ ಸೆಕ್ಯೂರಿಟಿ ಸೊಲ್ಯೂಷನ್ ನೆರವಿನೊಂದಿಗೆ ಬಾವಿಯ ಸುತ್ತ ಸಿಸಿ ಕ್ಯಾಮೆರಾ ಅಳವಡಿಸಿದ್ದಾರೆ. ಈ ಮೂಲಕ ದೂರದಿಂದ ಕಂಪ್ಯೂಟರ್ ಮೂಲಕ ಮೊಸಳೆಯ ಓಡಾಟವನ್ನು ಗಮನಿಸಲಾಗುತ್ತಿದೆ.

ಮೊಸಳೆ ಬಾವಿಯಿಂದ ಹೊರಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಬೋನಿಗೆ ಕೋಳಿ ಮಾಂಸ ಇಡಲಾಗಿದೆ. ನೂರಾರು ಜನ ಘಟನಾ ಸ್ಥಳಕ್ಕೆ ಬರುತ್ತಿದ್ದಾರೆ. ಸದ್ಯ ಸಿಸಿ ಕ್ಯಾಮೆರಾ ಮೂಲಕ ಚಲನವಲನದ ಬಗ್ಗೆ ನಿಗಾ ಇಡಲಾಗಿದೆ.

Scroll to Top