ಮಲ್ಪೆ: ಮಳೆಗಾಲದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿರುವುದರಿಂದ ಅಲೆಗಳು ಸಮುದ್ರದೊಳಗಿನ ಕಸಕಡ್ಡಿ ತ್ಯಾಜ್ಯಗಳನ್ನು ತೀರಕ್ಕೆ ತಂದು ಎಸೆಯುವುದು ಸಾಮಾನ್ಯ ಸಂಗತಿ.
ಇದೀಗ ಮಲ್ಪೆ ಬೀಚ್‌ನಲ್ಲಿ ಹೇರಳ ಪ್ರಮಾಣದಲ್ಲಿ ಕಸ ಬಿದ್ದಿದೆ. ಮಲ್ಪೆ ಸೀವಾಕ್‌ನಿಂದ ಬೀಚ್‌ವರೆಗೂ ಹರಡಿಕೊಂಡಿದೆ. ಕೆಲವಡೆ ದಪ್ಪ ದಪ್ಪ ಪದರಾಗಿ ಬಿದ್ದಿದೆ. ಇದರಲ್ಲಿ ಕೊಳೆತ ಗಿಡ, ಮರಗಳ ಎಲೆಗಳು ಮಾತ್ರವಲ್ಲದೆ ನಾನಾ ರೀತಿಯ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿ ಸೇರಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಇತ್ತೀಚೆಗೆ ಬಿದ್ದಿರುವ ಭಾರೀ ಮಳೆಗಾಳಿಯಿಂದಾಗಿ ಈ ತಾಜ್ಯಗಳು ನದಿ ನೀರಿನೊಂದಿಗೆ ಸಮುದ್ರ ಸೇರಿತ್ತು.
ಈಗ ಸಮುದ್ರ ಉಬ್ಬರದ ಸಮಯದಲ್ಲಿ ಸಾಗರ ಗರ್ಭ ಸೇರಿದ್ದ ಈ ಎಲ್ಲ ಕಸಕಡ್ಡಿಗಳು ಮಲ್ಪೆ ಬೀಚ್ ಕಡಲತೀರದಲ್ಲಿ ರಾಶಿಯಾಗಿ ಬಿದ್ದಿದೆ.
ಇಂದ್ರಾಣಿ, ಉದ್ಯಾವರ ಹೊಳೆಯ ಮೂಲಕ ಪ್ಲಾಸ್ಟಿಕ್ ಇಂದ್ರಾಣಿ ನದಿ, ಉದ್ಯಾವರ ಹೊಳೆಗಳು ಹರಿದು ಇಲ್ಲಿನ ಸಮುದ್ರ ಸೇರುತ್ತವೆ. ಇದಕ್ಕೆ ಹೊಂದಿಕೊಂಡಿರುವ ಜನರು ಪ್ಲಾಸ್ಟಿಕ್ ತ್ಯಾಜ್ಯವನ್ನು ನದಿಯಲ್ಲಿ ಎಸೆಯುತ್ತಿದ್ದು ಇವು ಹರಿದು ಬಂದು ಕೊನೆಯಲ್ಲಿ ಕಡಲು ಸೇರುತ್ತಿವೆ. ಹತ್ತಾರು ವರ್ಷ ಕರಗದ ಪ್ಲಾಸ್ಟಿಕ್‌ತ್ಯಾಜ್ಯಗಳು ಕಡಲಿನಲ್ಲಿಹಲವಾರು ವರ್ಷಗಳಿಂದ ಸಂಗ್ರಹವಾಗಿ ಕಡಲ ಪರಿಸರವನ್ನು ಸಂಪೂರ್ಣ ಹಾಳು ಮಾಡುತ್ತಿವೆ ಎಂಬುದು ಪರಿಸರ ಪ್ರಿಯರ ಆರೋಪವಾಗಿದೆ