ಉಡುಪಿ : ಖಾಲಿ ಮನೆಗಳನ್ನೇ ಗುರುತಿಸಿಕೊಂಡು ಕಳ್ಳತನ ನಡೆಸುವ ಘಟನೆ ಉಡುಪಿ ನಗರದಲ್ಲಿ ಮತ್ತೆ ಮುಂದುವರಿದಿದೆ.
ನಗರದ ಬುಡ್ನಾರಿನಲ್ಲಿ ಖಾಲಿ ಮನೆಗೆ ನುಗ್ಗಿದ ಕಳ್ಳರು ಲ್ಯಾಪ್‌ಟಾಪ್, ಟ್ಯಾಬ್, ಸುಮಾರು ಅಂದಾಜು 1.5 ಲ.ರೂ. ನಗದು, ಚಿನ್ನಾಭರಣಗಳು ಕಳವು ನಡೆದಿರುವ ಸಾಧ್ಯತೆಗಳಿವೆ ಎಂದು ಮನೆಯ ಸಂಬಂಧಿಕರು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದು, ಕದ್ದ ಸೊತ್ತುಗಳ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ ಎಂದು ನಗರ ಠಾಣೆಯ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.
ಸಂಬಂಧಿಕರ ಮನೆಗೆ ತೆರಳಿದ್ದರು
ದಿ.ಕೆ. ಮೊಹಮ್ಮದ್ ಅವರಿಗೆ ಸೇರಿದ ಡ್ರೀಮ್ ಹೌಸ್‌ನಲ್ಲಿ ಈ ಘಟನೆ ನಡೆದಿದೆ. ಕಳವು ನಡೆದ ಮನೆಯಲ್ಲಿ ತಾಯಿ ಹಾಗೂ ಮಗಳು ಇಬ್ಬರೇ ವಾಸಮಾಡಿಕೊಂಡಿದ್ದರು. ಕೆ. ಮೊಹಮ್ಮದ್ ಅವರು 6 ತಿಂಗಳ ಹಿಂದೆಯಷ್ಟೇ ನಿಧನ ಹೊಂದಿದ್ದರು. ಶನಿವಾರ ಸಂಜೆ ತಾಯಿ ಹಾಗೂ ಮಗಳು ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಮನೆಯವರು ನಾವಿಲ್ಲದಿದ್ದರೂ ಹೊರ ಭಾಗದಲ್ಲಿ ಸ್ವಚ್ಛ ಮಾಡುವಂತೆ ತಿಳಿಸಿದ ಮೇರೆಗೆ ಕೆಲಸದಾಕೆ ರವಿವಾರ ಬೆಳಗ್ಗೆ ಬಂದಿದ್ದಾಗ ಬಾಗಿಲು ಒಡೆದಿತ್ತು. ಕೂಡಲೇ ಕೆಲಸದಾಕೆ ಈ ವಿಚಾರವನ್ನು ಪಕ್ಕದ ಮನೆಯವರ ಬಳಿ ತಿಳಿಸಿದ ಮೇರೆಗೆ ಈ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಮನೆಯ ಚಿಲಕ ತೆಗೆದು ಒಳಭಾಗದಲ್ಲಿದ್ದ ಕಪಾಟಿನಲ್ಲಿ ಇಟ್ಟಿದ್ದ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ ಎನ್ನ ಲಾಗುತ್ತಿದೆ. ಮನೆಯಲ್ಲಿ ಇಟ್ಟಿರುವ ಹಣದ ಪ್ರಮಾಣ ಎಷ್ಟು ಹಾಗೂ ಇತರ ವಸ್ತುಗಳು ಏನಿತ್ತು ಎಂಬುವುದರ ಬಗ್ಗೆ ರವಿವಾರ ತಡರಾತ್ರಿಯವರೆಗೂ ಪೊಲೀಸರು ಮಾಹಿತಿ ಸಂಗ್ರಹಿಸಿದರು. ಸಂಪೂರ್ಣ ಮಾಹಿತಿ ಲಭಿಸಿದ ಬಳಿಕ ಎಫ್ಐಆರ್ ದಾಖಲಿಸ ಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಶ್ವಾನ ದಳ, ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ.