ಉಡುಪಿ : ನಾಗರ ಪಂಚಮಿ ನಾಡಿಗೆ ದೊಡ್ಡದು ಎಂಬ ಮಾತಿದೆ. ಇಂದು(ಆ.9) ನಾಡಿನೆಲ್ಲೆಡೆ ನಾಗರ ಪಂಚಮಿ ಆಚರಿಸಲಾಗುತ್ತಿದೆ. ಕರಾವಳಿ ಭಾಗದಲ್ಲಿ ಈ ಹಬ್ಬದ ಆಚರಣೆಯೊಂದಿಗೆ ಸಾಲು ಸಾಲು ಹಬ್ಬಗಳಿಗೆ ನಾಂದಿಯಾಗುತ್ತದೆ. ಪತ್ತನಾಜೆಯ ಬಳಿಕ ಸ್ಥಗಿತಗೊಂಡ ಹಬ್ಬಗಳ ಪರ್ಯಟನೆ ಇಂದು ಆರಂಭವಾಗುತ್ತದೆ. ನಾಗರ ಪಂಚಮಿಯ ಅಂಗವಾಗಿ ದಕ್ಷಿಣ ಭಾರತದ ಅತ್ಯಂತ ಪವಿತ್ರ ನಾಗಾರಾಧನಾ ಕ್ಷೇತ್ರಗಳಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ, ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನ ಸಹಿತ ಕರಾವಳಿಯ ವಿವಿಧ ನಾಗಾರಾಧನಾ ಕ್ಷೇತ್ರಗಳಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಾಗರ ಪಂಚಮಿ ಆಚರಣೆ ನಡೆಯುತ್ತಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಗಳು, ದೇವಾಲಯಗಳ ನಾಗಸನ್ನಿಧಿ, ಕುಟುಂಬದ ಮೂಲ ನಾಗಬನಗಳಲ್ಲಿ ನಾಗರಪಂಚಮಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಆ ಪ್ರಯುಕ್ತ ವಿಶೇಷ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.
ನಿಜ ನಾಗನಿಗೆ ಸೀಯಾಳಾಭಿಷೇಕ :
ನಾಡಿನೆಲ್ಲೆಡೆ ಭಕ್ತರು ಕಲ್ಲ ನಾಗನಿಗೆ ಹಾಲೆರೆದರೆ ಉಡುಪಿಯಲ್ಲಿ ಅರ್ಚಕರೊಬ್ಬರು ನಿಜ ನಾಗನಿಗೆ ಸೀಯಾಳಾಭಿಷೇಕ ಮಾಡಿದ್ದಾರೆ. ನಾಗದೇವರಿಗೆ ಜಲಾಭಿಷೇಕ, ಸೀಯಾಳಾಭಿಷೇಕ ಮಾಡಿದ ಕಾಪು ಮೂಲದ ಮಜೂರು ಗ್ರಾಮದ ಗೋವರ್ಧನ್ ರಾವ್ ಅವರು ಪ್ರತೀ ವರ್ಷವೂ ಜೀವಂತ ನಾಗನಿಗೆ ಹಾಲು ಎರೆಯುವ ಮೂಲಕ ನಾಗರಪಂಚಮಿ ಆಚರಿಸುತ್ತಿದ್ದಾರೆ.
ಗಾಯಗೊಂಡ ನಾಗಗಳನ್ನು ತಂದು ಆರೈಕೆ ಮಾಡುತ್ತಿದ್ದಾರೆ. ಈ ಬಾರಿ 4 ನಾಗ ಮನೆಯಲ್ಲಿದ್ದು, ಆರೈಕೆಗೊಂಡ ನಾಗ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.