ಲವ್ ಜಿಹಾದ್ ಆರೋಪ ಕೇಸ್ ಗೆ ಟ್ವಿಸ್ಟ್ : ಹಿಂದೂ ಸಂಘಟನೆ ಹೋರಾಟ, ತಂದೆಯ ಮನವಿಗೂ ಬಗ್ಗದೆ ಅಶ್ಫಾಕ್ ಜೊತೆ ವಿವಾಹವಾದ ಯುವತಿ

ಮಂಗಳೂರು : ಹಿಂದೂ ಯುವತಿ ಅನ್ಯಕೋಮಿನ ಯುವಕ ಜೊತೆ ತೆರಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಲವ್ ಜಿಹಾದ್ ಆರೋಪದ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

ಕ್ರಿಮಿನಲ್ ಹಿನ್ನಲೆಯುಳ್ಳ ಕೇರಳ ಮೂಲದ ಅಶ್ಫಾಕ್ ಎಂಬಾತ ಕೇರಳದ ಕಾಸರಗೋಡು ವಿದ್ಯಾನಗರ ನಿವಾಸಿ ಯುವತಿಯ ಜೊತೆ ಪರಿಚಯ ಬೆಳೆಸಿಕೊಂಡಿದ್ದು, ಕೆಲ ಸಮಯದ ನಂತರ ಆಕೆ ಆತನ ಜೊತೆ ತೆರಳಿದ್ದಳು, ಈ ಬಗ್ಗೆ ಯುವತಿಯ ತಂದೆ ವಿನೋದ್ ಅವರು ಠಾಣೆ ಮೆಟ್ಟಿಲೇರಿದ್ದು, ಬಳಿಕ ಮಗಳನ್ನು ಉಳಿಸಿಕೊಡುವಂತೆ ಹಿಂದೂ ಸಂಘಟನೆ ಮುಖಂಡರ ಬಳಿ ಮನವಿ ಮಾಡಿಕೊಂಡಿದ್ದರು.

ಹಿಂದೂ ಸಂಘಟನೆಗಳ ಹಲವು ದಿನಗಳ ಹೋರಾಟ, ತಂದೆ-ತಾಯಿಯ ಮನವಿಯ ಬಳಿಕವೂ ಯುವತಿ, ಅಶ್ಫಾಕ್ ಜೊತೆ ತೆರಳಿದ್ದಾಳೆನ್ನಲಾಗಿದೆ.


ಕ್ರಿಮಿನಲ್ ಹಿನ್ನಲೆ ಅಶ್ಫಾಕ್ ಎರಡು ತಿಂಗಳ ಪರಿಚಯದಲ್ಲೇ ಯುವತಿಯ ಮೈಂಡ್ ವಾಶ್ ಮಾಡಿ, ಆಕೆಯನ್ನು ಇಸ್ಲಾಂಗೆ ಮತಾಂತರಿಸಿ ವಿವಾಹವಾಗಿರುವುದಾಗಿ ಸಂಘಟನೆ ಆರೋಪಿಸಿದೆ.

ಕಾಸರಗೋಡು ನಿವಾಸಿ ಯುವತಿ ಮಂಗಳೂರಿನ ಉಳ್ಳಾಲದ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಬಿಸಿಎ ಶಿಕ್ಷಣ ಪಡೆಯುತ್ತಿದ್ದಳು. ಆದರೇ ವಿದ್ಯಾನಗರದಲ್ಲಿರುವಾಗಲೇ ಅಶ್ಫಾಕ್ ಮತ್ತು ಯುವತಿಯ ನಡುವೆ ಪ್ರೀತಿ ಚಿಗುರಿತ್ತು. ಜೂ.6 ರಂದು ಉಳ್ಳಾಲದಿಂದ ಯುವತಿಯನ್ನು ಅಶ್ಫಾಕ್ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಯುವತಿಯ ತಂದೆ ಅಪಹರಣ ಮಾಡಿರುವುದಾಗಿ ದೂರು ನೀಡಿದ್ದರು. ಬಳಿಕ ವಿದ್ಯಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿ, ಯುವತಿಯನ್ನು ಮನೆಯವರ ಜೊತೆ ಕಳುಹಿಸಿದ್ದರು. ಮತ್ತೆ ಜೂ.30 ರಂದು ಉಳ್ಳಾಲದಿಂದ ಯುವತಿಯನ್ನು ಅಶ್ಫಾಕ್ ಕರೆದುಕೊಂಡು ಹೋಗಿದ್ದು, ಬಳಿಕ ವಿದ್ಯಾನಗರ ಪೊಲೀಸರು ಪತ್ತೆ ಹಚ್ಚಿದ್ದು, ಮಂಗಳೂರಿನ ಕೌನ್ಸಿಲಿಂಗ್ ಕೇಂದ್ರಕ್ಕೆ ಯುವತಿಯನ್ನು ಕಳುಹಿಸಿದ್ದರು.

ಈ ಬಗ್ಗೆ ವಿಎಚ್ಪಿ ನಾಯಕರನ್ನು ಭೇಟಿಯಾಗಿ ಆಕೆಯ ತಂದೆ ಮಗಳನ್ನು ಉಳಿಸಿಕೊಡುವಂತೆ ಮನವಿ ಮಾಡಿಕೊಂಡಿದ್ದರು.

ಕಾನೂನು ಹೋರಾಟದ ಮೂಲಕ ಆಕೆಯನ್ನು ವಾಪಾಸ್ ತರಿಸೋ ಭರವಸೆಯನ್ನು ವಿಹೆಚ್ಪಿ ಯುವತಿಯ ಕುಟುಂಬಕ್ಕೆ ನೀಡಿದ್ದು, ಬಳಿಕ ಆಕೆಯನ್ನು ಮಂಗಳೂರಿನ ಕೌನ್ಸಿಲಿಂಗ್  ಸೆಂಟರ್ ಗೆ ಹಾಕಿದ್ದಾರೆನ್ನಲಾಗಿದೆ. ಆದರೇ ಅಶ್ಫಾಕ್ ಕೇರಳ ಹೈ ಕೋರ್ಟ್ ಗೆ ಹೆಬಿಯಾಸ್ ಕಾರ್ಪಸ್ ಅರ್ಜಿ ಹಾಕಿದ್ದು, ಕೇರಳ ಹೈಕೋರ್ಟ್ ಆದೇಶದಂತೆ ಯುವತಿ, ಅಶ್ಫಾಕ್ ಜೊತೆ ತೆರಳಿದ್ದು, ಅವರಿಬ್ಬರು ವಿವಾಹವಾಗಿದ್ದಾರೆನ್ನಲಾಗಿದೆ.

ಇದೀಗ ಹಿಂದೂ ಯುವತಿಯನ್ನು ಅಶ್ಫಾಕ್ ಇಸ್ಲಾಂ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಬಗ್ಗೆ ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು, ಕೇರಳ ಹೈಕೋರ್ಟ್ ಆದೇಶದಂತೆ ವಿಸ್ಮಯಳನ್ನು ಮದುವೆಯಾದ ನಟೋರಿಯಸ್ ಕ್ರಿಮಿನಲ್ ಮೊಹಮ್ಮದ್ ಆಸ್ಫಕ್..  ಕ್ಷಮಿಸಿ ವಿನೋದ್ ರವರೆ ನಿಮ್ಮ ಮಗಳನ್ನು ಉಳಿಸಲು ನಮ್ಮಿಂದ ಸಾಧ್ಯವಿಲ್ಲ.. ಎಂದು ಬರೆದುಕೊಂಡಿದ್ದಾರೆ.

Scroll to Top