ಉಡುಪಿ : ಮಗು ಅನಧಿಕೃತ ಮಾರಾಟ: ಪ್ರಕರಣ ದಾಖಲು

ಉಡುಪಿ : ಮಗು ಮಾರಾಟ ಘಟನೆಗೆ ಸಂಬಂಧಿಸಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜು.19ರಂದು ಆರೋಪಿಗಳಾದ ರಾಬಿಯಾ ಬಾನು ಮತ್ತು ಖಾಲಿದ್‌ ಸಯ್ಯದ್‌ ಅವರಿಗೆ ಹೆಣ್ಣು ಮಗು ಜನಿಸಿತ್ತು. ಆದರೆ ಆ ಮಗು ಅವರ ವಶದಲ್ಲಿ ಇಲ್ಲದಿರುವ ಬಗ್ಗೆ ಆ.6 ರಂದು ಪೆರಂಪಳ್ಳಿಯ ಅಂಗನವಾಡಿ ಕಾರ್ಯಕರ್ತೆ ಸರಿತಾ ಡಿ’ಸೋಜಾ ಅವರು ಮಕ್ಕಳ ರಕ್ಷಣ ಘಟಕಕ್ಕೆ ಮಾಹಿತಿ ನೀಡಿದ್ದರು.

ಅನಂತರ ಮಕ್ಕಳ ರಕ್ಷಣ ಘಟಕದ ಸಾಮಾಜಿಕ ಕಾರ್ಯಕರ್ತರಾದ ಸುರಕ್ಷಾ, ಯೋಗೀಶ್‌ ಹಾಗೂ ಸರಿತಾ ಡಿ’ಸೋಜಾ ಅವರು ಪೆರಂಪಳ್ಳಿಯ ಶೀಂಬ್ರ ಭಟ್ರಕೋಡಿಯಲ್ಲಿರುವ ಆರೋಪಿಗಳ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮನೆಗೆ ಬೀಗ ಹಾಕಲಾಗಿತ್ತು. ಖಾಲಿದ್‌ಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಬಳಿಕ ಮೊಬೈಲ್‌ ಸ್ವಿಚ್‌ ಆಫ್ ಆಗಿತ್ತು. ಈ ಬಗ್ಗೆ ಸುರಕ್ಷಾ ಅವರು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಆ.7ರಂದು ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು.

ವಿಚಾರಣೆ ವೇಳೆ ಆರೋಪಿಗಳು ಮಗುವನ್ನು ಮೂಲ್ಕಿಯ ನಿವಾಸಿ ವಾಜಿದ್‌ ಅವರಿಗೆ ಕಾನೂನು ಬಾಹಿರವಾಗಿ ನೀಡಿರುವುದಾಗಿ ತಿಳಿಸಿದ್ದರು. ಬಳಿಕ ಮಹಿಳಾ ಪೊಲೀಸ್‌ ಠಾಣೆಯ ಉಪನಿರೀಕ್ಷಕರು ವಾಜಿದ್‌ನ ಬಗ್ಗೆ ವಿಚಾರಣೆ ಮಾಡಿ ಆತನನ್ನು ಠಾಣೆಗೆ ಬರುವಂತೆ ತಿಳಿಸಿದ್ದರು. ಆತ ಮಗುವಿನೊಂದಿಗೆ ಬಂದಿದ್ದು, ಮಗುವಿನ ಮಾರಾಟದ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಇದ್ದುದರಿಂದ ಪ್ರಕರಣ ದಾಖಲಿಸಲು ಸಾಧ್ಯವಾಗಿರಲಿಲ್ಲ.

ಪ್ರಸ್ತುತ ಸುರಕ್ಷಾ ಅವರ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಬಾಲ ನ್ಯಾಯ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ. ಪ್ರಸ್ತುತ ತಾಯಿ-ಮಗುವನ್ನು ಸುರಕ್ಷತೆಯ ದೃಷ್ಟಿಯಿಂದ ಉಡುಪಿಯ ಸಖೀ ಒನ್‌ ಸ್ಟಾಪ್‌ ಸೆಂಟರ್‌ಗೆ ದಾಖಲಿಸಲಾಗಿದೆ. ಪೊಲೀಸರು ಮತ್ತಷ್ಟು ತನಿಖೆ ನಡೆಸುತ್ತಿದ್ದಾರೆ.

Scroll to Top