ಲೇಡಿಸ್‌ ಟಾಯ್ಲೆಟ್‌ನಲ್ಲಿ ಮೊಬೈಲ್‌ ಕ್ಯಾಮೆರಾ.. ಬೆಂಗಳೂರಿನ ಕೆಫೆ ಶಾಪ್‌ನಲ್ಲಿ ಬೆಚ್ಚಿ ಬೀಳಿಸಿದ ಘಟನೆ; ಆಗಿದ್ದೇನು?

ಬೆಂಗಳೂರು ಕಾಫಿ ಶಾಪ್‌ನ ವಾಷ್‌ ರೂಂನಲ್ಲಿ ಮೊಬೈಲ್ ಕ್ಯಾಮರಾ ಬಚ್ಚಿಟ್ಟು ವೀಡಿಯೋ ರೆಕಾರ್ಡ್‌ ಮಾಡಿರೋ ಘಟನೆಯೊಂದು ಬೆಳಕಿಗೆ ಬಂದಿದೆ.

ಮಹಿಳಾ ಗ್ರಾಹಕರು ಕಾಫಿ ಶಾಪ್‌ನ ಟಾಯ್ಲೆಟ್‌ಗೆ ಹೋದಾಗ ಹಿಡೆನ್ ಕ್ಯಾಮೆರಾ ಪತ್ತೆಯಾಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಮಹಿಳೆ ಈ ಮಾಹಿತಿಯನ್ನು ಕೆಫೆ ಸಿಬ್ಬಂದಿಗೆ ತಿಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಬೆಂಗಳೂರಿನ ಹೆಣ್ಮಕ್ಕಳೇ ಹುಷಾರ್ ಎಂದು ಎಚ್ಚರಿಸಿದ್ದಾರೆ.

ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೆಫೆಯ ವಾಶ್ ರೂಂನಲ್ಲಿ ಮೊಬೈಲ್ ಕ್ಯಾಮರಾ ಇಡಲಾಗಿತ್ತು. ಡಸ್ಟ್‌ಬಿನ್ ಕವರ್‌ನಲ್ಲಿ ಯಾರಿಗೂ ಡೌಟ್ ಬರದಂತೆ ಫೋನ್ ಬಚ್ಚಿಡಲಾಗಿದ್ದು, ಸುಮಾರು ಎರಡು ಗಂಟೆಗಳ ಕಾಲ ರೆಕಾರ್ಡಿಂಗ್‌ನಲ್ಲಿತ್ತು. ಯಾವುದೇ ಕರೆಗಳು, ಮೆಸೇಜ್ ಬರದಂತೆ ಫ್ಲೈಟ್ ಮೋಡ್‌ನಲ್ಲಿ ಇಡಲಾಗಿತ್ತು ಎನ್ನಲಾಗಿದೆ. ಲೇಡಿಸ್‌ ವಾಶ್ ರೂಂನಲ್ಲಿದ್ದ ಮೊಬೈಲ್‌ ಫೋನ್‌ ಅನ್ನು ಪರಿಶೀಲಿಸಿದಾಗ ಅದು ಕೆಫೆ ಸಿಬ್ಬಂದಿಗೆ ಸೇರಿದ ಫೋನ್ ಅನ್ನೋದು ಗೊತ್ತಾಗಿದೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದ ಮಹಿಳೆ ಹಾಗೂ ಕೆಫೆ ಸಿಬ್ಬಂದಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರ ವಿಚಾರಣೆ ವೇಳೆ ಭದ್ರಾವತಿ ಮೂಲದ ಯುವಕನಿಂದ ಈ ಕೃತ್ಯ ನಡೆದಿದೆ ಅನ್ನೋದು ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಯುವಕ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮೊಬೈಲ್ ಫೋನ್ ವಶಕ್ಕೆ ಪಡೆದಿರುವ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.

ಆರೋಪಿಯು ಕೆಫೆಯ ವಾಶ್ ರೂಂನ ಡಸ್ಟ್ ಬಿನ್‌ನಲ್ಲಿ ಹೋಲ್ ಮಾಡಿ ಮೊಬೈಲ್ ಇಟ್ಟಿದ್ದ. ಫ್ಲೈಟ್ ಮೋಡ್‌ನಲ್ಲಿ ವೀಡಿಯೋ ರೆಕಾರ್ಡಿಂಗ್ ಆನ್ ಮಾಡಿ ಇಟ್ಟಿದ್ದ ಎನ್ನಲಾಗಿದೆ. ಮಹಿಳೆಯೊಬ್ಬರು ವಾಶ್ ರೂಮ್‌ಗೆ ಹೋದಾಗ ಮೊಬೈಲ್ ಇರೋದು ಪತ್ತೆಯಾಗಿದೆ.

ಕೇಂದ್ರ ವಿಭಾಗದ ಡಿಸಿಪಿ ಶೇಖರ್, ಹೆಚ್.ಟಿ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಹಿಳೆಯೊಬ್ಬರು ತಕ್ಷಣವೇ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಂದ ಮೊಬೈಲ್ ಇಟ್ಟಿದ್ದ ಸಿಬ್ಬಂದಿ ಬಂಧಿಸಲಾಗಿದೆ. ಶಿವಮೊಗ್ಗ ಮೂಲದ 23 ವರ್ಷದ ಮನೋಜ್ ಬಂಧಿತ ಆರೋಪಿ. ಈಗ ಕಾಫಿ ಶಾಪ್‌ನಲ್ಲಿ ಕಾಫಿ ಮೇಕರ್ ಆಗಿದ್ದ ಎಂದಿದ್ದಾರೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಕೆಫೆ ಅವರು ಸೋಷಿಯಲ್ ಮೀಡಿಯಾದಲ್ಲಿ ಕ್ಷಮೆ ಕೇಳಿ ಸಿಬ್ಬಂದಿಯನ್ನು ವಜಾ ಮಾಡಿದ್ದಾರೆ.

Scroll to Top