ಉಡುಪಿಯಲ್ಲಿ ಮಾನವ ಸರಪಳಿ ರಚನೆ

ಉಡುಪಿ : ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾತ್ಮಕ ಅಕ್ರಮಣವನ್ನು ವಿರೋಧಿಸಿ, ಸಮಾಜದ ಜಾಗೃತಿಗಾಗಿ ಸೋಮವಾರ ಹಿಂದೂ ಹಿತರಕ್ಷಣ ಸಮಿತಿಯಿಂದ ಉಡುಪಿ ನಗರದಲ್ಲಿ ಮಾನವ ಸರಪಳಿ ರಚಿಸಲಾಯಿತು.

ಕಲ್ಸಂಕದಿಂದ ಆರಂಭಗೊಂಡ ಮಾನವ ಸರಪಳಿ ಸಿಟಿ ಬಸ್‌ ನಿಲ್ದಾಣದ ವರೆಗೆ ಹಾಗೂ ಮಣಿಪಾಲ ಮಾರ್ಗದಲ್ಲಿ ಕಡಿಯಾಳಿಯವರೆಗೂ ಮಾನವ ಸರಪಣಿ ರಚಿಸಿ, ಪ್ಲೇ ಕಾರ್ಡ್‌ಗಳನ್ನು ಪ್ರದರ್ಶಿಸಲಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘ, ವಿಶ್ವಹಿಂದೂ ಪರಿಷತ್‌, ಹಿಂದೂ ಜಾಗರಣ ವೇದಿಕೆ, ಬಿಜೆಪಿ ಹೀಗೆ ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಾಂಗ್ಲಾದ ಹಿಂದೂಗಳಿಗೆ ರಕ್ಷಣೆ ನೀಡಬೇಕು. ಇತರೆಲ್ಲ ವಿಷಯಗಳಿಗೂ ಮಾರುದ್ಧ ಹೇಳಿಕೆ ನೀಡುವವರು ಹಿಂದೂಗಳ ಮೇಲಿನ ದೌರ್ಜನ್ಯವನ್ನು ಖಂಡಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.
ಬಾಂಗ್ಲಾದಲ್ಲಿ ರಾಜಕೀಯ ಅಸ್ಥಿರತೆಯಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಸ್ಲಿಂ ಮತೀಯವಾದಿಗಳು ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ರಾಷ್ಟ್ರೀಯವಾದಿ ಭಾರತೀಯರು ಒಕ್ಕೊರಲಿನಿಂದ ಖಂಡಿಸಬೇಕು. ಹಿಂದೂ ದೇವಸ್ಥಾನ, ಆರಾಧನಾ ಕೇಂದ್ರಗಳ ಮೇಲೆ ದಾಳಿ, ಹಿಂದೂ ಧರ್ಮೀಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸುತ್ತಾ ಹಿಂದೂ ವಿರೋಧಿ ನೀತಿ ನಡೆಸುತ್ತಿರುವ ಮತಾಂಧ ಶಕ್ತಿಗಳ ವಿರುದ್ಧ ಬಾಂಗ್ಲಾ ಸರಕಾರ ತತ್‌ಕ್ಷಣ ಕಠಿನ ಕ್ರಮಕೈಗೊಂಡು ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ತಿಳಿಸಿದರು.

You cannot copy content from Baravanige News

Scroll to Top