ಚಂಡೀಗಢ: ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ಭಾರಿ ಕುತೂಹಲ ಕೆರಳಿಸಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾಗಿರುವ ಮ್ಯಾಜಿಕ್ ಸಂಖ್ಯೆ 46 ಆಗಿದೆ.
ಆರಂಭಿಕ ಟ್ರೆಂಡ್ ಪ್ರಕಾರ ಕಾಂಗ್ರೆಸ್ ಮುನ್ನಡೆಯಲ್ಲಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್ 51 ಸ್ಥಾನಗಳ ಮುನ್ನಡೆ ಗಳಿಸಿತ್ತು. ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಯಾಚರಣೆ ಕೂಡ ಆರಂಭವಾಗಿತ್ತು. ದೆಹಲಿಯ ಎಐಸಿಸಿ ಕಚೇರಿಯಲ್ಲಿ ಲಾಡು ವಿತರಿಸಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಾಚರಣೆ ಆರಂಭಿಸಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಟ್ರೆಂಡ್ ಬದಲಾಗಿದ್ದು, ಕಾಂಗ್ರೆಸ್ ಅನ್ನು ಹಿಂದಿಕ್ಕಿರುವ ಬಿಜೆಪಿ ಮುನ್ನಡೆ ಗಳಿಸಿದೆ. ಆ ಮೂಲಕ ಹಾವು-ಏಣಿಯಾಟ ಮುಂದುವರಿದಿದೆ.
ಚುನಾವಣಾ ಆಯೋಗದ ತಾಜಾ ಟ್ರೆಂಡ್ ಪ್ರಕಾರ ಬಿಜೆಪಿ 49, ಕಾಂಗ್ರೆಸ್ 35 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದರೊಂದಿಗೆ ಬಿಜೆಪಿ ‘ಹ್ಯಾಟ್ರಿಕ್’ ಸಾಧನೆ ಮಾಡುವ ನಿರೀಕ್ಷೆ ಗರಿಗೆದರಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 40 ಕ್ಷೇತ್ರಗಳಲ್ಲಿ ಗೆದ್ದು, ಜೆಜೆಪಿ ಮತ್ತು ಇತರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿತ್ತು. ಮತಗಟ್ಟೆ ಸಮೀಕ್ಷೆಗಳು, 10 ವರ್ಷದ ಅಂತರದ ಬಳಿಕ ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಇದು ಹುಸಿಯಾಗುವ ಸಂಭವ ಕಂಡುಬರುತ್ತಿದೆ.