ಗೂಗಲ್ ಮ್ಯಾಪ್ ನೋಡಿ ಸೇತುವೆಯಿಂದ ನದಿಗೆ ಬಿದ್ದ ಕಾರು – ಮೂವರು ಮೃತ್ಯು

ಉತ್ತರಪ್ರದೇಶ: ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಗೂಗಲ್ ಮ್ಯಾಪ್ ನಂಬಿ ಹೊರಟ ಕಾರೊಂದು ನಿರ್ಮಾಣ ಹಂತದ ಸೇತುವೆಯ ಮೇಲಿಂದ ನದಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ಸಂಭವಿಸಿದ್ದು ಭಾನುವಾರ ಬೆಳಿಗ್ಗೆ ವಿಚಾರ ಬೆಳಕಿಗೆ ಬಂದಿದೆ.

ಘಟನೆಯಲ್ಲಿ ಮೃತಪಟ್ಟವರನ್ನು ವಿವೇಕ್ ಮತ್ತು ಅಮಿತ್ ಎನ್ನಲಾಗಿದ್ದು ಇನ್ನೋರ್ವನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ಮದುವೆ ಸಮಾರಂಭವೊಂದರಲ್ಲಿ ಭಾಗಿಯಾಗಲು ವಿವೇಕ್ ಹಾಗೂ ಅಮಿತ್ ಶನಿವಾರ ಬಾಡಿಗೆ ಕಾರೊಂದನ್ನು ಗೊತ್ತುಪಡಿಸಿ ಗುರುಗ್ರಾಮದಿಂದ ಉತ್ತರಪ್ರದೇಶದ ಬರೇಲಿಗೆ ಹೊರಟಿದ್ದರು. ಈ ವೇಳೆ ಮಾರ್ಗ ಸರಿಯಾಗಿ ಗೊತ್ತಿರದ ಕಾರಣ ಚಾಲಕ ಗೂಗಲ್ ಮ್ಯಾಪ್ ಮೊರೆ ಹೋಗಿದ್ದು ಅದರಂತೆ ಬರೇಲಿ ಸಮೀಪದ ನಿರ್ಮಾಣ ಹಂತದ ಸೇತುವೆಯ ದಾರಿ ತೋರಿಸಿದೆ ಅದರಂತೆ ಕಾರು ಚಾಲಕ ಅದೇ ಮಾರ್ಗವನ್ನು ಅನುಸರಿಸಿಕೊಂಡು ಹೋಗಿದ್ದಾನೆ. ಆದರೆ ಸೇತುವೆ ಅಪೂರ್ಣಗೊಂಡಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು ಐವತ್ತು ಅಡಿ ಆಳದ ರಾಮಗಂಗಾ ನದಿಗೆ ಬಿದ್ದಿದೆ ಅಷ್ಟೋತ್ತಿಗಾಗಲೇ ರಾತ್ರಿಯಾಗಿದ್ದ ಕಾರಣ ವಿಚಾರ ಯಾರಿಗೂ ಗೊತ್ತಾಗಿಲ್ಲ ಮರುದಿನ ಭಾನುವಾರ ಬೆಳಿಗ್ಗೆ ಅಲ್ಲಿನ ಸ್ಥಳೀಯರು ನದಿಗೆ ಬಿದ್ದಿರುವ ಕಾರೊಂದನ್ನು ಗಮನಿಸಿದ್ದಾರೆ ಬಳಿಕ ಕಾರಿನ ಬಳಿ ತೆರಳಿದ್ದಾರೆ ಈ ವೇಳೆ ಕಾರಿನಲ್ಲಿ ಮೂವರು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ ಕೂಡಲೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಈ ನಡುವೆ ಅಮಿತ್ ಹಾಗೂ ವಿವೇಕ್ ಕುಟುಂಬ ಸದಸ್ಯರು ಘಟನಾ ಸ್ಥಳಕ್ಕೆ ಧಾವಿಸಿ ಸೇತುವೆ ನಿರ್ಮಾಣ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ, ಸೇತುವೆಗೆ ಬ್ಯಾರಿಕೇಡ್ ಇಡದೆ ಈ ದುರಂತ ಸಂಭವಿಸಿದೆ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top