ನಾಯಿಗೆ ಅರ್ಧ ಟಿಕೆಟ್: KSRTC ಹೊಸ ರೂಲ್ಸ್

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಲಗೇಜು ಸಾಗಾಣೆಯ ನಿಯಮಗಳು ಮಾರ್ಪಾಡು ಮಾಡಲು ತೀರ್ಮಾನಿಸಲಾಗಿದ್ದು, ಅದರಂತೆ ನಾಯಿಯನ್ನು ಕೊಂಡೊಯ್ಯಲು ಒಬ್ಬ ವಯಸ್ಕ ಪ್ರಯಾಣಿಕರನ್ನು ಪರಿಗಣಿಸಿ ವಿಧಿಸಲಾಗುತ್ತಿದ್ದ ದರದಲ್ಲಿ ಬದಲಾವಣೆ ಮಾಡಲಾಗಿದೆ. ಇನ್ನುಮುಂದೆ ನಾಯಿ ಮತ್ತು ನಾಯಿಯ ಮರಿಗೆ ಅರ್ಧ ಟಿಕೆಟ್ ದರವನ್ನು ವಿಧಿಸುವಂತೆ ತಿಳಿಸಲಾಗಿದೆ.

ಪ್ರಯಾಣಿಕರು ನಾಯಿಯ ಮೇಲೆ ವಿಧಿಸುವ ಟಿಕೆಟ್ ದರವನ್ನು ಕಡಿಮೆ ಮಾಡಬೇಕು ಎಂದು ಒತ್ತಾಯ ಮಾಡ್ತಿದ್ರು, ಈ ಒತ್ತಡಕ್ಕೆ ಮಣಿದ ಸಾರಿಗೆ ಇಲಾಖೆ ಈ ನಿರ್ಧಾರ ಕೈಗೊಂಡಿದೆ. ಸಾಮಾನ್ಯ ವೇಗದೂತ, ನಗರ ಹೊರವಲಯ ಬಸ್‌ಗಳಲ್ಲಿ ನಾಯಿ ಸಾಗಾಣಿಕೆಗೆ ಅವಕಾಶ ಮಾಡಿಕೊಡಲಾಗಿದೆ. ಹಾಗೆಯೇ ಬಸ್‌ನಲ್ಲಿ ಯದ್ವಾತದ್ವಾ ಲಗೇಜ್ ಸಾಗಾಣಿಕೆಗೆ ಬ್ರೇಕ್ ಹಾಕಲಾಗಿದೆ. ಪ್ರತಿ ಪ್ರಯಾಣಿಕರ 30 ಕೆಜಿ ಲಗೇಜ್ ಕೊಂಡೊಯ್ಯಲು ಅವಕಾಶವಿದ್ದು, 30 ಕೆಜಿಗಿಂತ ಹೆಚ್ಚು ಸಾಗಾಣಿಕೆಗೆ ಹೆಚ್ಚುವರಿ ದರ ವಿಧಿಸಲು ಕೆಎಸ್ ಆರ್ ಟಿಸಿ ಆದೇಶಿಸಿದೆ.

ಬಸ್‌ನಲ್ಲಿ 30 ಕೆ.ಜಿವರೆಗೂ ಉಚಿತ ಲಗೇಜ್ ಸಾಗಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಬಸ್‍ನಲ್ಲಿ ಇರುವ ಸ್ಥಳಾವಕಾಶ ಬಳಕೆಗೆ ಪ್ರಯಾಣಿಕರ ಸಹಿತ, ಪ್ರಯಾಣಿಕರ ರಹಿತ ಸಾಗಣೆ ಬಗ್ಗೆ ಉಲ್ಲೇಖಸಿದೆ. ಪ್ರಯಾಣಿಕರ ವೈಯಕ್ತಿಕ ಲಗೇಜ್, ಬ್ಯಾಗ್, ಸೂಟ್ ಕೇಸ್ ಇತ್ಯಾದಿ ಪರಿಮಿತಿ ಮೀರದಂತೆ ಸೂಚಿಸಿದೆ.

ವೈಯಕ್ತಿಕವಾಗಿ ಕೊಂಡೊಯ್ಯುವ ಲಗೇಜ್​ ತೂಕ 30 ಕೆಜಿವರೆಗೆ ಯಾವುದೇ ದರ ವಿಧಿಸುತ್ತಿಲ್ಲ. ಬ್ಯಾಗ್​, ಸೂಟ್​ಕೇಸ್​, ಕಿಟ್​ ಬ್ಯಾಗ್​ ದಿನಸಿ, ಅಕ್ಕಿ, ತೆಂಗಿನಕಾಯಿ, ರಾಗಿ, ಅಕ್ಕಿ ಹಿಟ್ಟು, ತರಕಾರಿ, ಹೂ ಹಣ್ಣು, ಸೀಲಿಂಗ್​ ಫ್ಯಾನ್​, ಒಂದು ಮಿಕ್ಸರ್​ ಗ್ರೈಂಡರ್​ ಬಾಕ್ಸ್​ ಇತ್ಯಾದಿ ವಸ್ತುಗಳು 30 ಕೆಜಿ ಒಳಗೆ ಪರಿಗಣಿಸಲಾಗುತ್ತದೆ. ಲಗೇಜ್​ 30 ಕೆಜಿ ಮೀರಿದರೆ ಅದರ ಮೇಲೆ ನಿಯಮದ ಪ್ರಕಾರ ದರ ವಿಧಿಸಲಾಗುತ್ತದೆ. ಈ ಕುರಿತು ಕೆಎಸ್​ಆರ್​ಟಿಸಿ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.

Scroll to Top