ಬ್ಯಾಂಕ್ ನಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳು ಮಾಯ!

ಕೋಲಾರ: ಕ್ಯಾಸಂಬಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿದ್ದ 54 ಲಕ್ಷ ರೂ. ಬೆಲೆ ಬಾಳುವ ಚಿನ್ನದ ಒಡವೆಗಳು ಕಾಣೆಯಾಗಿರುವ ಬಗ್ಗೆ ಕ್ಯಾಸಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಪ್ರಾದೇಶಿಕ ವ್ಯವಸ್ಥಾಪಕ ದೇವದಾಸ್‌ ದೂರು ನೀಡಿದ್ದಾರೆ.

ಕ್ಯಾಸಂಬಳ್ಳಿ ಬ್ಯಾಂಕಿನ ವ್ಯವಸ್ಥಾಪಕ ಎಸ್‌.ಎಸ್‌. ನಾಯಕ್‌, ಸಿಬ್ಬಂದಿಯಾದ ಲತಾ ಸುಂದರ್‌ರಾಜನ್‌, ಬಿ.ವಿ. ಮಂಜುನಾಥ್‌, ಬಾಲುಮಹೇಂದ್ರ ಅವರ ಮೇಲೆ ಕ್ಯಾಸಂಬಳ್ಳಿ ಪೊಲೀಸರು ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಮೂರು ತಿಂಗಳಿಗೆ ಒಮ್ಮೆ ಭದ್ರತಾ ವಸ್ತುಗಳ ತಪಾಸಣೆ ಕೈಗೊಳ್ಳುವ ಪರಿಪಾಠ ಇದೆ. ಇದೇ ರೀತಿ ಮಾಲೂರಿನ ಬ್ಯಾಂಕ್‌ ಅಧಿಕಾರಿ ಯಜ್ಞನಾರಾಯಣ ಅವರು ಭದ್ರತಾ ವಸ್ತುಗಳ ಪರಿಶೀಲನೆ ಮಾಡುವಾಗ 20 ಗ್ರಾಹಕರು ಅಡವಿಟ್ಟ ಚಿನ್ನದ 20 ಕವರ್ ಕಾಣೆಯಾಗಿದ್ದವು.

ಈ ಬಗ್ಗೆ ಸಂಶಯಗೊಂಡ ಪ್ರಾದೇಶಿಕ ವ್ಯವಸ್ಥಾಪಕರು ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ.

ಕೆವಿಜಿ ಬ್ಯಾಂಕ್‌ನಿಂದ ದೀಪಾವಳಿ ಉಡುಗೊರೆ, ಗರಿಷ್ಠ ಬಡ್ಡಿದರದ ನಿಶ್ಚಿತ ಠೇವಣಿ ಯೋಜನೆ ಬಿಡುಗಡೆ
ಈ ಸಂಬಂಧ ಹೆಚ್ಚಿನ ತನಿಖೆ ಮಾಡುವಂತೆ ಬೆಂಗಳೂರಿನ ವಿಜಯನಗರ ಶಾಖೆಯ ವ್ಯವಸ್ಥಾಪಕ ವೀರೇಂದ್ರ ಕುಮಾರ್‌ ಅವರಿಗೆ ಪ್ರಧಾನ ಕಚೇರಿ ಅಧಿಕಾರಿಗಳು ಸೂಚನೆ ನೀಡಿದ್ದರು. ಕ್ಯಾಸಂಬಳ್ಳಿ ಬ್ಯಾಂಕಿನ ಭದ್ರತಾ ಲಾಕರ್‌ನ ತಪಾಸಣೆ ನಡೆಸಿದ ಸಂದರ್ಭದಲ್ಲಿ 20 ಗ್ರಾಹಕರು ಗಿರವಿ ಇಟ್ಟಿದ್ದ 20ಕವರ್ ಕಾಣೆಯಾಗಿರುವ ಬಗ್ಗೆ ಖಚಿತಪಡಿಸಿದ್ದಾರೆ.

ಒಟ್ಟು 1,436.5 ಗ್ರಾಂನ ಚಿನ್ನದ ಒಡವೆಗಳು ಕಾಣೆಯಾಗಿದ್ದು, ಅಡವಿಟ್ಟ ಒಟ್ಟು ಆಭರಣದ ಮೌಲ್ಯ 34,09,000 ರೂ. ಒಟ್ಟು ಚಿನ್ನದ ಮೌಲ್ಯ 54,68,298 ಲಕ್ಷ ರೂಪಾಯಿಗಳಾಗಿರುವುದಾಗಿ ದೇವದಾಸ್‌ ಕ್ಯಾಸಂಬಳ್ಳಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪೊಲೀಸರಿಂದ ತನಿಖೆ….
ದೂರು ದಾಖಲಿಸಿಕೊಂಡ ಕ್ಯಾಸಂಬಳ್ಳಿ ಪೊಲೀಸ್‌ ಠಾಣೆ ಸಬ್‌ಇನ್ಸ್‌ಪೆಕ್ಟರ್‌ ಶ್ಯಾಮಲಾ ಬ್ಯಾಂಕಿನ ಸಿಬ್ಬಂದಿ ಗಳನ್ನು ತನಿಖೆಗೆ ಒಳಪಡಿಸಿದ್ದಾರೆ.
ನಾಪತ್ತೆಯಾದ‌ ಸಿಬ್ಬಂದಿ….
ಮುಳಬಾಗಲು ನಿವಾಸಿಯಾದ ಮಂಜುನಾಥ್‌ ಎಂಬುವರು ಒಂದು ವರ್ಷದಿಂದ ಕ್ಯಾಸಂಬಳ್ಳಿ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳವು ಪ್ರಕರಣ ಬೆಳಕಿಗೆ ಬಂದ ನಂತರ ಮಂಜುನಾಥ್‌ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮಂಜುನಾಥ್‌ಗಾಗಿ ಕ್ಯಾಸಂಬಳ್ಳಿ ಪೊಲೀಸ್‌ರು ಹುಡುಕಾಟ ನಡೆಸುತ್ತಿದ್ದು, ಕಳುವು ಪ್ರಕರಣದಲ್ಲಿ ಮಂಜುನಾಥ್‌ ಸಿಕ್ಕಿದ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ.

ಬ್ಯಾಂಕಿನಲ್ಲಿ ಚಿನ್ನ ಗಿರವಿ ಇಟ್ಟ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸ್ವಲ್ಪ ತಡವಾಗುತ್ತದೆ, ಗಿರವಿ ಇಟ್ಟ ಗ್ರಾಹಕರ ಚಿನ್ನವನ್ನು ಬಿಡಿಸಿಕೊಳ್ಳಲು ಅವಕಾಶವಿರುತ್ತದೆ ಎಂದು ಕೋಲಾರ-ಚಿಕ್ಕಬಳ್ಳಾಪುರ ಪ್ರಾದೇಶಿಕ ವ್ಯವಸ್ಥಾಪಕ ದೇವದಾಸ್‌ ತಿಳಿಸಿದ್ದಾರೆ.

Scroll to Top