ಕಾಲೇಜು ನಿವೃತ್ತ ಕ್ಲರ್ಕ್​ನಿಂದ ಲೈಂಗಿಕ ಕಿರುಕುಳ : ಮೂಡಬಿದಿರೆಯ ಪಿಯು ವಿದ್ಯಾರ್ಥಿನಿ ಸಾವಿಗೆ ಶರಣು..!

ಮಂಗಳೂರು: ಲೈಂಗಿಕ ಕಿರುಕುಳದಿಂದ ಮನನೊಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿಯೋರ್ವಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡದ ಮೂಡಬಿದಿರೆಯಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ವಿದ್ಯಾರ್ಥಿನಿಗೆ ಮಂಗಳವಾರ ತರಗತಿಯಲ್ಲಿ ಕಿವಿನೋವು ಕಾಣಿಸಿಕೊಂಡಿತ್ತು. ಹೀಗಾಗಿ, ಕಾಲೇಜಿನ ಪ್ರಾಂಶುಪಾಲರು ಆಕೆಯನ್ನು ಮನೆಗೆ ಕಳುಹಿಸಿದ್ದರು.ವಿದ್ಯಾರ್ಥಿನಿಯನ್ನು ಮನೆಗೆ ತಲುಪಿಸುವಂತೆ ಪರಿಚಿತರಾದ ಕಾಲೇಜಿನ ನಿವೃತ್ತ ಕ್ಲರ್ಕ್‌ ಶ್ರೀಧರ ಪುರಾಣಿಕ್‌ ಎಂಬುವರನ್ನು ಜೊತೆಗೆ ಕಳುಹಿಸಿದ್ದರು. ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ವಿದ್ಯಾರ್ಥಿನಿಗೆ ಶ್ರೀಧರ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ಇದರಿಂದ ಮಾನಸಿಕವಾಗಿ ನೊಂದ ವಿದ್ಯಾರ್ಥಿನಿ, ತನ್ನ ಆತ್ಮಹತ್ಯೆಗೆ ಶ್ರೀಧರ ಪುರಾಣಿಕ್ ಅವರೇ ಕಾರಣ ಎಂದು ತಿಳಿಸಿ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದು ಮನೆಯ ಪಕ್ಕದಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆರೋಪಿ ಶ್ರೀಧರ ಪುರಾಣಿಕ್‌ನನ್ನು (62) ಬಂಧಿಸಿ, ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪಣಂಬೂರು ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. .

You cannot copy content from Baravanige News

Scroll to Top