ಪಾರ್ವತಿ ಪ್ರೀತಿಯಿಂದ ಸಾಕಿದ ಹಂದಿ ಮರಿ ಪಂಜುರ್ಲಿಯಾದದ್ದು ಹೇಗೆ? 

ವರಾಹ ರೂಪಿ ಎಂದು ಕರೆಯಲ್ಪಡುವ ದೈವ ಪಂಜುರ್ಲಿ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿ ದೈವವನ್ನು ತುಳುನಾಡಿನಾದ್ಯಂತ ಹಂದಿ ರೂಪವಾಗಿಯೂ ಪೂಜಿಸಲಾಗುತ್ತದೆ.

ನಮ್ಮ ಜಗತ್ತಿನಲ್ಲಿ ದೇವರನ್ನು ಬೇರೆ ಬೇರೆ ರೂಪದಲ್ಲಿ ಪೂಜೆ ಮಾಡುತ್ತಾರೆ. ಪ್ರತಿಯೊಂದಕ್ಕೂ ಬೇರೆ ಬೇರೆ ಇತಿಹಾಸ ಇದೆ. ಸಾಮಾಜಿಕ ನೆಲೆಯ ಜೊತೆಗೆ ಧಾರ್ಮಿಕ ನೆಲೆಯು ಮುಖ್ಯ, ಈ ಕಾರಣಕ್ಕೆ ದೇವರನ್ನು ದೈವ ಎಂದು ಪೂಜೆ ಮಾಡುತ್ತಾರೆ. ಹೌದು ದಕ್ಷಿಣಕನ್ನಡವನ್ನು ಪರಶುರಾಮನ ಸೃಷ್ಟಿ ಎಂದು ಕರೆಯುತ್ತಾರೆ. ತುಳುನಾಡಿನಲ್ಲಿ ಯಕ್ಷಗಾನ, ಕಂಬಳ ಹಾಗೆಯೇ ಅನೇಕ ವಿಚಾರಕ್ಕೆ ಸಂಬಂಧಿಸಿದಂತೆ ಆಚರಣೆಗಳನ್ನು ನಡೆಯುತ್ತಾ ಬಂದಿದೆ. ಆಚರಣೆ ಎಂದಾಗ ತಕ್ಷಣಕ್ಕೆ ಕಣ್ಮುಂದೆ ಬರುವುದು ದೈವರಾಧನೆ, ಇಲ್ಲಿಯ ಆರಾಧನೆಗೆ ಒಂದು ಶಕ್ತಿ ಇದೆ. ಇದು ಇಲ್ಲಿನ ನಂಬಿಕೆಯ ಅಸ್ಮಿತೆ, ಬದುಕಿನ ಸೂತ್ರವು ಹೌದು, ಸ್ಪಷ್ಟ ನೆಲೆಗಟ್ಟಿನಲ್ಲಿ ಬೆಳೆದು ನಿಂತ ದೈವ ಶಕ್ತಿ, ಮನುಷ್ಯ ಆರಾಧನೆ ಮಾಡುವ ಈ ಶಕ್ತಿಗಳಿಗೆ ಒಂದು ಅದ್ಭುತ ಇತಿಹಾಸ ಇದೆ.

ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಒಂದು ಅದ್ಭುತವನ್ನು ಸೃಷ್ಟಿಸಿದ ಸಿನಿಮಾ ಕಾಂತರ, ಇದು ತುಳುನಾಡಿ ಅಸ್ಮಿತೆಯಾಗಿರುವ ದೈವದ ಬಗ್ಗೆ ಮತ್ತು ನಮ್ಮ ನಲಿಕೆ, ಪರವ, ಕೊರಗ, ಪಂಬಂದ ಈ ಜನಾಂಗದ ಕಷ್ಟ ನೋವುಗಳನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಈ ಜಾತಿಯ ಜನ ತುಳುನಾಡಿನ ದೈವಕ್ಕೆ ಕೋಲ ಕಟ್ಟುವ ಪದ್ಧತಿ ಇದೆ. ಇದರ ಜೊತೆಗೆ ಈ ಜಾತಿಗೂ ಮತ್ತು ದೈವಕ್ಕೆ ಒಂದು ಇತಿಹಾಸ.

ತುಳುನಾಡಿನ ಜನರು ದೇವರನ್ನು ಎಷ್ಟು ನಂಬುತ್ತಾರೆ ಅದೇ ರೀತಿಯಾಗಿ ತಮ್ಮ ಪೂರ್ವಜರ ಕಾಲದಿಂದಲೂ ದೈವಾರಾಧನೆಯನ್ನು ಅಷ್ಟೇ ನಂಬುತ್ತಾರೆ. ಈ ನಾಡಿನಲ್ಲಿ ದೈವವನ್ನು ಬೇರೆ ಬೇರೆ ಹೆಸರಿನಿಂದ ದೈವರಾಧನೆ ಅನೇಕ ತಲೆಮಾರುಗಳಿಂದ ನಡೆಸಿಕೊಂಡು ಬಂದಿದ್ದಾರೆ. ಹಿಂದಿನ ಕಾಲದಲ್ಲಿ ಕೃಷಿಯನ್ನು ಹೆಚ್ಚಾಗಿ ಅವಲಂಬಿಸಿಕೊಂಡಿದ್ದರು, ತಾವು ಬೆಳೆದ ಬೆಳೆಗಳನ್ನು ರಕ್ಷಿಸಲು ದೈವವನ್ನು ಪೂಜಿಸುತ್ತಿದ್ದರು. ಆಯಾ ಗ್ರಾಮಕ್ಕೆ ಅಥವಾ ಮನೆತನಕ್ಕೆ ಹೊಂದಿಕೊಂಡು ದೈವವನ್ನು ಆರಾಧನೆ. ಹಾಗೆಯೇ ಪ್ರತಿಯೊಂದು ದೈವಕ್ಕೂ ಅದರದೇ ಆದ ಇತಿಹಾಸವಿದೆ ಜೊತೆಗೆ ಅದಕ್ಕೆ ಮಹತ್ವವೂ ಇದೆ.

ವರಾಹ ರೂಪಿ ಎಂದು ಕರೆಯಲ್ಪಡುವ ದೈವ ಪಂಜುರ್ಲಿ. ತುಳುನಾಡಿನ ಪ್ರಾಚೀನ ದೈವಗಳಲ್ಲಿ ಪಂಜುರ್ಲಿಯೂ ಒಂದು. ಪಂಜುರ್ಲಿ ದೈವವನ್ನು ತುಳುನಾಡಿನಾದ್ಯಂತ ಹಂದಿ ರೂಪವಾಗಿಯೂ ಪೂಜಿಸಲಾಗುತ್ತದೆ. ಇದರ ಇತಿಹಾಸದ ಪ್ರಕಾರ, ಒಂದು ದಿನ ಹಂದಿ ಮರಿ ಶಿವನ ಹೂವಿನ ತೋಟಕ್ಕೆ ಪ್ರವೇಶಿಸುತ್ತದೆ, ಆ ಹಂದಿ ಮರಿಯ ಮುದ್ದಾದ ಮುಖ ಕಂಡ ಪಾರ್ವತಿಯು, ಹಂದಿ ಮರಿಯನ್ನು ಅರಮನೆಗೆ ತಂದು ಪ್ರೀತಿಯಿಂದ ಸಾಕುತಾಳಂತೆ. ತುಂಬಾ ತುಂಟನಾಗಿದ್ದ ಈ ಹಂದಿ ಮರಿ ಶಿವನ ಹೂದೋಟಕ್ಕೆ ಮತ್ತೊಂದು ಬಾರಿ ನುಗ್ಗಿ ಹೂಗಳನ್ನು ನಾಶ ಮಾಡುತ್ತದೆ ಎಂದು ಕಥೆಯಲ್ಲಿ ಹೇಳಲಾಗಿದೆ, ಇದರಿಂದ ಕೋಪಕೊಂಡಂತಹ ಶಿವ ಅದರ ಶಿರಚ್ಚೇದ ಮಾಡುತ್ತಾನೆ.

ಈ ವಿಷಯ ತಿಳಿದ ಪಾರ್ವತಿ ತನ್ನ ಪ್ರೀತಿಯ ಹಂದಿ ಮರಿ ಮರಳಿ ಬದುಕಿಸುವಂತೆ ದುಃಖದಿಂದ ಕೇಳಿಕೊಳ್ಳುತ್ತಾಳೆ. ಆಕೆಯ ಬೇಡಿಕೆಗೆ ಕರಗಿದ ಶಿವ ಆ ಹಂದಿಗೆ ಮರು ಜೀವ ನೀಡಿ ದೈವ ಶಕ್ತಿಯನ್ನು ವರದಾನವಾಗಿ ನೀಡುತ್ತಾನೆ. ನಂತರ ದಿನಗಳಲ್ಲಿ ಭೂಲೋಕದಲ್ಲಿ ಧರ್ಮ ಸಂರಕ್ಷಣೆಗಾಗಿ ವರಾಹ ರೂಪಿ ಪಂಜುರ್ಲಿ ದೈವವಾಗಿ ದುಷ್ಟರನ್ನು ಶಿಕ್ಷಿಸಿ, ನಂಬಿದವರ ಪಾಲಿಗೆ ಬೆಂಗಾವಲಾಗಿ ನಿಲ್ಲುವಂತೆ ವರಪ್ರಸಾದನ್ನು ನೀಡುತ್ತಾನೆ.

ಭೂಲೋಕದಲ್ಲಿ ನೆಲೆಸಿದ ಪಂಜುರ್ಲಿಯೂ ಪರಶುರಾಮನ ಭೂಮಿಯ ಅನೇಕ ಕಡೆಗಳಲ್ಲಿ ತನ್ನ ಕಾರ್ಣಿಕವನ್ನು ನಂಬಿದವರಿಗೆ ಶ್ರೀರಕ್ಷೆಯನ್ನು ನೀಡುತ್ತಾನೆ. ಇದರ ದೈವ ನರ್ತನೆಯೂ ಹಾಗೆ ನರ್ತಕನು ತನ್ನ ಮುಖಕ್ಕೆ ಹಂದಿಯ ದೈವ ಮುಗ ( ದೈವದ ಮೂರ್ತಿ) ಧರಿಸಿ ಕುಣಿಯುತ್ತಾರೆ. ಇದರ ಮೂಲ ಹೆಸರು ಪಂಜುರ್ಲಿ ಆದರೂ ಅನೇಕ ಕಡೆಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಇದನ್ನು ನಂಬಲಾಗುತ್ತದೆ. ಶಿವನ್ನು ಗಣಮಣಿ ಎಂಬ ಹೆಸರನ್ನು ಇಟ್ಟು ಭೂಲೋಕಕ್ಕೆ ಕಳಿಸುತ್ತಾನೆ. ನಂತರ ಕುಪ್ಪೆಟ್ಟು ಪಂಜುರ್ಲಿ, ವರ್ಣರ ಪಂಜುರ್ಲಿ, ಕುಕ್ಕೆ ಪಂಜುರ್ಲಿ, ಅಂಗಣ ಪಂಜುರ್ಲಿ, ಇನ್ನೂ ಅನೇಕ ನಾಮಗಳಿಂದ ಆರಾಧಿಸುತ್ತಾರೆ. ಹೀಗೆ ಕೈಲಾಸದಿಂದ ಶಿವನ ವರದಿಂದ ಭೂಲೋಕಕ್ಕೆ ಬಂದ ವರಹ ರೂಪಿ ಪಂಜುರ್ಲಿ ನಂಬಿದವರಿಗೆ ರಕ್ಷಣೆ ನೀಡುವ ದೈವವಾಗಿ ಮನೆ ಮನಗಳಲ್ಲಿ ನಂಬಿಕೆ ಮತ್ತು ಕಾರ್ಣಿಕದ ಶಕ್ತಿಯಾಗಿ ನೆಲೆಯೂರಿದ್ದಾನೆ.

ಕವಿತಾ, ವಿಟ್ಲ

Scroll to Top